Saturday, November 08, 2025
Menu

ಧರ್ಮಸ್ಥಳದ ಶವ ಪತ್ತೆ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತಲು 74 ಅನಾಥ ಶವಗಳನ್ನು ಹೂತು ಹಾಕಿರುವ ಆರೋಪ ಸಂಬಂಧದ ಎಲ್ಲ ಪ್ರಕರಣಗಳಲ್ಲೂ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಬೇಕು ಎಂದು ಕೋರಿ ಮೃತ ಬೆಳ್ತಂಗಡಿ ವಿದ್ಯಾರ್ಥಿನಿಯ ತಾಯಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಎಲ್ಲ ಅನಾಥ ಶವಗಳು ಮತ್ತು ನಾಪತ್ತೆ ಪ್ರಕರಣದಲ್ಲಿ ಅವರ ಪೋಷಕರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದ್ದು, ಪ್ರತಿಯೊಂದು ಪ್ರಕರಣಕ್ಕೂ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಮೃತ ವಿದ್ಯಾರ್ಥಿನಿಯ ತಾಯಿ ಈ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ.

ಜೊತೆಗೆ, ಎರಡು ವರ್ಷಗಳವರೆಗೆ ನೂರಾರು ಅನಾಥ ಶವಗಳನ್ನು ಹೂತುಹಾಕಿದ್ದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ವ್ಯಕ್ತಿ ಇದೀಗ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯಲ್ಲಿನ ವಿವರ:

ಪ್ರತಿಯೊಂದು ಪ್ರಕರಣದಲ್ಲಿ ಶವ ಹೂತ ಸ್ಥಳದಲ್ಲಿ ಉತ್ಖನನ ಮಾಡಿ ಅವಶೇಷಗಳನ್ನು ವೈಜ್ಞಾನಿಕವಾಗಿ ಹೊರತೆಗೆಯಬೇಕು. ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ಡಿಎನ್‌ಎ ಪರೀಕ್ಷೆಯ ಮೂಲಕ ಮೃತ ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು. ತನಿಖೆ ನಡೆಸಿ ಪ್ರತಿಯೊಂದು ಸಾವಿಗೂ ಕಾರಣ ಪತ್ತೆ ಹಚ್ಚಬೇಕು. ಸಾಕ್ಷಿಗಳನ್ನು ಗುರುತಿಸಿ, ಅವರ ಹೇಳಿಕೆಗಳನ್ನು ದಾಖಲಿಸಬೇಕು. ಆರೋಪಿಗಳನ್ನು ಪತ್ತೆ ಹಚ್ಚಿ ಅವರನ್ನು ವಿಚಾರಣೆಗೆ ಒಳಪಡಿಸುಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟಣೆ:

ಧರ್ಮಸ್ಥಳದಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಹುಡುಕಾಟ ನಡೆಸುತ್ತಿರುವ ಕುಟುಂಬಸ್ಥರನ್ನು ಪತ್ತೆ ಹಚ್ಚುವುದಕ್ಕಾಗಿ ಅವರಿಗೆ ಮಾಹಿತಿ ನೀಡಲು ಆಂಗ್ಲ ಮತ್ತು ಕನ್ನಡ ಭಾಷೆಯ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಕಾಣೆಯಾದವರ ಕುಟುಂಬಸ್ಥರ ನೇರವಾಗಿ ಎಸ್‌ಐಟಿ ಅಧಿಕಾರಿಗಳನ್ನು ಭೇಟಿಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಬೇಕು ಎಂದು ಎಸ್‌ಐಟಿ ತಂಡಕ್ಕೆ ನಿರ್ದೇಶನ ನೀಡಬೇಕು. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ತಮ್ಮ ತನಿಖಾ ವರದಿಯನ್ನು ಮಾಸಿಕವಾಗಿ ನ್ಯಾಯಾಲಯಕ್ಕೆ ಸಲ್ಲಿಸುವುದು, ವರದಿಯನ್ನು ಆಧರಿಸಿ ನ್ಯಾಯಾಲಯವೇ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಕಾನೂನು ಪ್ರಕಾರ ಸೂಕ್ತ ಕ್ರಮ:

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸಾವುಗಳ ಸಂಬಂಧ ತನಿಖಾಧಿಕಾರಿಗಳು ಸಂಪೂರ್ಣ ತನಿಖಾ ಪ್ರಕ್ರಿಯೆಯನ್ನೂ ಉಲ್ಲಂಘಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. ಬೇಜಬ್ದಾರಿತನ ಮತ್ತು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪಾರದರ್ಶಕ ತನಿಖೆ:

ಧರ್ಮಸ್ಥಳದಲ್ಲಿ ಗ್ರಾಮದಲ್ಲಿ ಕಾಣೆಯಾದ ವ್ಯಕ್ತಿಗಳ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಪತ್ತೆಯಾದ ಶವಗಳ ಅವಶೇಷಗಳನ್ನು ವಿಧಿವಿಜ್ಞಾನ ಅಧಿಕಾರಿಗಳ ಸಮ್ಮುಖದಲ್ಲಿ ಗುರುತಿಸುವುದು. ಈ ಎಲ್ಲ ಪ್ರಕರಣಗಳಲ್ಲಿ ಸಾಕ್ಷ್ಯನಾಶಕ್ಕೆ ಕಾರಣವಾದವರಿಗೆ ಶಿಕ್ಷೆ ವಿಧಿಸುವ ಕಾರ್ಯ ಆಗಬೇಕಾಗಿದೆ. ತನಿಖೆಯ ಮೇಲೆ ಪ್ರಭಾವ ಬೀರುವ ಸಂದರ್ಭಗಳಿದ್ದು, ಪ್ರಕರಣ ಸಂಬಂಧ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುವಂತಾಗಬೇಕು. ಆಗ ಮಾತ್ರ ಪಾರದರ್ಶಕ ತನಿಖೆಗೆ ಸಹಕಾರಿಯಾಗಲಿದೆ.

ತನಿಖೆಯ ಮೇಲ್ವಿಚಾರಣೆ ನ್ಯಾಯಾಂಗದ ಸೂಚನೆಯ ಮೇಲಿದ್ದಲ್ಲಿ, ಈವರೆಗೂ ನಡೆದ ತನಿಖೆಯಲ್ಲಿನ ಲೋಪಗಳಾಗದಂತೆ ಕ್ರಮ ವಹಿಸಬಹುದು ಮತ್ತು ತನಿಖೆ ಮತ್ತೆ ಹಳಿತಪ್ಪದಂತೆ ನೋಡಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮಧ್ಯಪ್ರವೇಶ ಅತ್ಯಗತ್ಯವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ತನಿಖೆಗೆ ತಡೆ: ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸಲು ಕೋರಿ ಹೋರಾಟ ಮಾಡುತ್ತಿದ್ದ ಮಹೇಶ್‌ ಶೆಟ್ಟಿ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಇಡೀ ಎಸ್‌ಐಟಿ ತನಿಖೆಗೆ ತಡೆ ನೀಡಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯ ತಾಯಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *