ಕಬ್ಬು ದರ ನಿಗದಿಗಾಗಿ ರೈತರು ನಡೆಸುತ್ತಿರುವ ಹೋರಾಟ 7ನೇ ದಿನಕ್ಕೆ ಹಿಂಸಾಚಾರಕ್ಕೆ ತಿರುಗಿದೆ. ಉದ್ವಿಗ್ನಗೊಂಡ ಪ್ರತಿಭಟನಾಕಾರರ ಗುಂಪು, ಪೊಲೀಸರು, ಪೊಲೀಸ್ ವಾಹನಗಳ ಮೇಲೆಯೇ ಕಲ್ಲು ತೂರಾಟ ನಡೆಸಿದೆ.
ಚಿಕ್ಕೊಡಿಯ ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟಿಸಿದರು. ಸರ್ಕಾರದ ನಿರ್ಧಾರ ಪ್ರಕಟಕ್ಕೂ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು.
ಹತ್ತರಗಿ ಟೋಲ್ ಬಳಿ ರೈತರು ಜಮಾವಣೆಗೊಂಡು ಪ್ರತಿಭಟಿಸುತ್ತಿದ್ದಾಗ ಘಟನೆ ನಡೆದಿದೆ. ಲೀಸ್ ವಾಹನಗಳ ಮೇಲೂ ಕಲ್ಲು ತೂರಿದರು. ಪರಿಸ್ಥಿತಿ ನಿಯಂತ್ರಿಸಲಾಗದೇ ಸ್ಥಳದಿಂದ ಪೊಲೀಸರು ಓಡಿದರು.
ಪೊಲೀಸರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದೂ ಅಲ್ಲದೇ ಎಳೆದಾಡಿದ್ದಾರೆ. ಈ ಘರ್ಷಣೆಯಲ್ಲಿ ಡಿವೈಎಸ್ ಪಿ ಅವರ ಕೈಗೆ ಮೂಳೆ ಮುರಿದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಪ್ರತಿಭಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 4ರ ಹತ್ತರಗಿ ಟೋಲ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. 250ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು. ಪ್ರತಿಭಟನೆ ಮಾಡುವ ರೈತರನ್ನು ವಶಕ್ಕೆ ಪಡೆಯಲು 5 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ರೈತರನ್ನ ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಡ್ರಾಮಾ ನಡೆಯಿತು. ರೈತರನ್ನು ಒತ್ತಾಯಪೂರ್ವಕವಾಗಿ ರಸ್ತೆಯಿಂದ ವಾಪಸ್ ಕಳುಹಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಜಟಾಪಟಿ ನಡೆಯಿತು.


