ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವು ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದು, ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಪರಿಸರ ಮಾಲಿನ್ಯಕಾರಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಸ್ಥಾವರ ವಿಫಲವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಕ್ಕೆ ಸಲ್ಲಿಸಿದೆ ಎನ್ನಲಾದ ವರದಿಗೆ ಸಂಬಂಧಿಸಿದಂತೆ ‘ದಿ ಫ್ರೈಡೇಸ್‌ಫಾರ್‌ಫ್ಯೂಚರ್-ಕರ್ನಾಟಕ’ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಕೆಪಿಸಿಎಲ್, ಘಟಕದಲ್ಲಿ ಪರಿಸರ ನಿಯಮಗಳನ್ನು ಪಾಲಿಸುವ ಜತೆಗೆ ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಸ್ಥಾವರದ ಕಾರ್ಯಾರಂಭಕ್ಕೆ 2024ರ ಜುಲೈ 20ರಂದು ಅನುಮತಿ ನೀಡಿದ್ದು, ಅದಾದ ಬಳಿಕವೇ ಘಟಕದ ಕಾರ್ಯಾಚರಣೆ ಆರಂಭಿಸಲಾಗಿದೆ.
ಘನತ್ಯಾಜ್ಯ ನಿರ್ವಹಣಾ ನಿಯಮಗಳು- 2016ರ ಅಡಿಯಲ್ಲಿ ಘಟಕಕ್ಕೆ ಅನುಮತಿ ಪಡೆಯುವ ಬಗ್ಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ 2025ರ ಅಕ್ಟೋಬರ್ 13ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
ಸ್ಥಾವರವು 2025ರ ಆಗಸ್ಟ್ 25ರಂದು ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸರ್ವರ್ ಗಳೊಂದಿಗೆ ಸಂಪರ್ಕ ಸಾಧಿಸಿದೆ. ಪ್ರಸ್ತುತ ಸ್ಥಾವರದ ಎಲ್ಲಾ ಮಾಹಿತಿಗಳು ಆನ್ ಲೈನ್ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಲಭ್ಯವಿದೆ. ಪ್ರತಿ ಕ್ಷಣದ ಮಾಹಿತಿಯೂ ಮಂಡಳಿಗೆ ಸಿಗುತ್ತಿದೆ ಎಂದು ಕೆಸಿಪಿಎಲ್ ಸ್ಪಷ್ಟಪಡಿಸಿದೆ.
ಸ್ಥಾವರದಲ್ಲಿ ಉತ್ಪತ್ತಿಯಾಗುವ ಕಲ್ಮಶಯುಕ್ತ ನೀರು (leachate) ಪಕ್ಕದಲ್ಲೇ ಸಂಸ್ಕರಿಸಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಪರೀಕ್ಷಿಸಿ ಶುದ್ಧವಾಗಿದೆ ಎಂದು ಖಚಿತವಾದ ಬಳಿಕ ಸಂಸ್ಕರಿಸಿದ ನೀರನ್ನು ಸ್ಥಾವರದಲ್ಲಿ ಮತ್ತೆ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಪರಿಸರಕ್ಕೆ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕಲ್ಮಶಯುಕ್ತ ನೀರನ್ನು ಸರಿಯಾದ ಮೇಲ್ವಿಚಾರಣೆ ಮತ್ತು ಪರೀಕ್ಷೆಯಿಲ್ಲದೆ ಬಿಡುಗಡೆ ಮಾಡಲಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಹೇಳಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯಾದ ಬಳಿಕ ಹೊರಬರುವ ತಳ ಬೂದಿ ಮತ್ತು ಹಾರು ಬೂದಿಯನ್ನು ಪ್ರಸ್ತುತ ಬಿಬಿಎಂಪಿ ಮೂಲಕವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಈ ಮಧ್ಯೆ, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿ ಆರ್ ಆರ್ ಐ) ಗೆ 2025 ಜುಲೈ 1ರಂದು ಪ್ರಸ್ತಾವನೆ ಸಲ್ಲಿಸಿ, ಈ ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಅವರು ಪತ್ರ ಬರೆದು ಸಂಶೋಧನೆಗೆ 44.84 ಲಕ್ಷ ರೂ. ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಈ ಹಣವನ್ನು ಸಿ ಆರ್ ಆರ್ ಐ ಗೆ ನೀಡಲಾಗಿದೆ. ಶೀಘ್ರದಲ್ಲೇ ಅದು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ತಳ ಬೂದಿ ಮತ್ತು ಹಾರು ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಂಡರೆ ಅವುಗಳ ವಿಲೇವಾರಿ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಪ್ರತಿನಿತ್ಯ 600 ಟನ್ ತ್ಯಾಜ್ಯ ಸಂಸ್ಕರಿಸಿ 11.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಬಿಡದಿಯ ವಿದ್ಯುತ್ ಸ್ಥಾವರಕ್ಕೆ ಪ್ರಸ್ತುತ 200 ಟನ್ ಸಂಸ್ಕರಿಸಿದ ಒಣ ತ್ಯಾಜ್ಯ ಬರುತ್ತಿದೆ. ಈ ತಿಂಗಳಾಂತ್ಯದೊಳಗೆ ಇದರ ಪ್ರಮಾಣ 500 ಟನ್ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ತ್ಯಾಜ್ಯದಲ್ಲಿ ಸ್ವಲ್ಪ ಮಟ್ಟಿನ ತೇವಾಂಶ ಇದೆಯಾದರೂ ಅದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಘಟಕದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಕೆಪಿಸಿಎಲ್ ಹೇಳಿದೆ.
ಪಸ್ತುತ ಬಿಡದಿಯ ತ್ಯಾಜ್ಯದಿದ ವಿದ್ಯುತ್ ಉತ್ಪಾದಿಸುವ ಘಟಕವು ಪರಿಸರಕ್ಕೆ ಸಂಬಂದಿಸಿದಂತೆ ಎಲ್ಲಾ ಮಾನದಂಡಗಳನ್ನು ಪೂರೈಸುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ವಿಷಕಾರಿ ಮಾಲಿನ್ಯಕಾರಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದೆ.


