ನವದೆಹಲಿ: ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕ್ರೀಡಾ ಸಂಕೀರ್ಣ ಮುಂತಾದ ಕಡೆಗಳಲ್ಲಿರುವ ಬೀದಿನಾಯಿಗಳನ್ನು ಪುನರ್ ವಸತಿ ಕೇಂದ್ರಕ್ಕೆ ರವಾನಿಸಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ವಿಕ್ರಂ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ನೇತೃತ್ವದ ತ್ರಿಸದಸ್ಯ ಪೀಠ ಬೀದಿ ನಾಯಿಗಳ ದಾಳಿ ಕುರಿತು ವಿಚಾರಣೆ ನಡೆಸಿ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಜನವರಿ 13ಕ್ಕೆ ವಿಚಾರಣೆಯನ್ನು ಮುಂದೂಡಿತು.
ಸರ್ಕಾರಿ ಹಾಗೂ ಖಾಸಗಿ ಸ್ಥಳಗಳಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ ತಡೆಯಬೇಕು ಹಾಗೂ ಬೀದಿನಾಯಿಗಳನ್ನು ಹಿಡಿದು ಮೊದಲಿದ್ದ ಜಾಗಕ್ಕೆ ಬಿಡಬೇಕು. ಬೀದಿನಾಯಿಗಳ ಜಾಗ ಬದಲಿಸುವುದರಿಂದ ಅವುಗಳ ವರ್ತನೆ ಬದಲಾಗಿ ದಾಳಿ ನಡೆಸುವ ಸಾಧ್ಯತೆ ಹೆ್ಚ್ಚಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಬೀದಿ ನಾಯಿಗಳು ನೆಲೆಸಲು ಸೂಕ್ತ ಜಾಗ ಗಮನಕಿಸಬೇಕು. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ನಿಯಮಿತವಾಗಿ ಬೀದಿನಾಯಿಗಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ದಾಳಿಕೋರ ಹಾಗೂ ಆಕ್ರಮಣಕಾರಿ ಬೀದಿನಾಯಿಗಳನ್ನು ಗುರುತಿಸಿ ಅವುಗಳನ್ನು ಆ ಜಾಗದಿಂದ ತೆರವುಗೊಳಿಸುವುದು ಹಾಗೂ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಕೆಲಸ ಆಗಬೇಕು ಎಂದು ನ್ಯಾಯಾಲಯ ಸೂಚಿಸಿತು.
ನ್ಯಾಯಾಲಯವು ನಿರ್ದೇಶಿಸಿದ ಎಬಿಸಿ ನಿಯಮಗಳನ್ನು ಪಾಲಿಸುವಲ್ಲಿ ಅಮಿಕಸ್ ಕ್ಯೂರಿ (ನ್ಯಾಯಾಲಯದಿಂದ ನೇಮಿಸಲ್ಪಟ್ಟ ವಕೀಲರು) ಎತ್ತಿ ತೋರಿಸಿದ ಲೋಪಗಳನ್ನು ಸರಿಪಡಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಗಮನಿಸಿದೆ.
ಮುಂದಿನ ವಿಚಾರಣೆಗೆ ಮುನ್ನ ಸಮಗ್ರ ವಿವರಗಳನ್ನು ಸಲ್ಲಿಸಬೇಕು, ವರದಿಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಈ ಬಗ್ಗೆ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.


