Menu

ಅಹಮದಾಬಾದ್‌ ವಿಮಾನ ದುರಂತ: ಯಾರನ್ನೂ ಹೊಣೆ ಮಾಡದೆ ಭವಿಷ್ಯದಲ್ಲಿ ಇಂಥ ದುರಂತ ತಡೆಗೆ ಕ್ರಮ ವಹಿಸಿ ಎಂದ ಸುಪ್ರೀಂ

supreme court

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಕಾರಣವಲ್ಲ, ಇದೊಂದು ಅಪಘಾತವಾಗಿದ್ದು, ಪೈಲಟ್ ಅನ್ನು ಹೊಣೆ ಮಾಡಬಾರದು, ಇಲ್ಲಿ ಯಾರನ್ನೂ ಹೊಣೆ ಮಾಡದೆ ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಈ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ತಂದೆ ಪುಷ್ಕರಾಜ್ ಸಭರ್ವಾಲ್ ಮತ್ತು ಭಾರತೀಯ ಪೈಲಟ್‌ಗಳ ಒಕ್ಕೂಟವು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ಹೇಳಿದ್ದು, ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ. ಮುಂದಿನ ವಿಚಾರಣೆಯನ್ನು ನ.10ಕ್ಕೆ ನಿಗದಿಗೊಳಿಸಿದೆ.

ದುರಂತಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ಕೋರಿ ಪುಷ್ಕರಾಜ್ ಸಭರ್ವಾಲ್ ಅರ್ಜಿ ಸಲ್ಲಿಸಿದ್ದರು. ಅಪಘಾತಕ್ಕೆ ತಮ್ಮ ಮಗ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರನ್ನು ಹೊಣೆಯಾಗಿಸಲಾಗುತ್ತಿದೆ. ಈ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಪ್ರಾಥಮಿಕ ತನಿಖಾ ವರದಿಯಲ್ಲಿಯೂ ಪೈಲಟ್ ವಿರುದ್ಧ ಯಾವುದೇ ಆರೋಪಗಳಿಲ್ಲ, ಅಪಘಾತಕ್ಕೆ ನಿಮ್ಮ ಮಗ ಕಾರಣನಲ್ಲ, ನೀವು ಕೂಡ ನಿಮ್ಮ ಮೇಲೆ ಹೊಣೆ ಹಾಕಿಕೊಳ್ಳಬಾರದು ಎಂದು ಹೇಳಿದೆ.

ಪುಷ್ಕರಾಜ್ ಸಭರ್ವಾಲ್ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್, ಅಮೆರಿಕದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಪೈಲಟ್ ಅನ್ನು ಹೊಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಾಲಯವು ಅದು ಭಾರತವನ್ನು ದೂಷಿಸುವ ವರದಿಯಾಗಿತ್ತು ಎಂದು ಹೇಳಿದೆ.

ಜೂನ್ 12 ರಂದು ಏರ್ ಇಂಡಿಯಾ ವಿಮಾನ ಅಹಮದಾಬಾದ್ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ನಿಲ್ದಾಣಕ್ಕೆ ಹೊರಟಿತ್ತು. ಕೆಲವು ಸೆಕೆಂಡುಗಳ ನಂತರ ಹತ್ತಿರದ ವೈದ್ಯಕೀಯ ಕಾಲೇಜಿನ ಮೇಲೆ ಅಪ್ಪಳಿಸಿತು. ಈ ಅಪಘಾತದಲ್ಲಿ 260 ಮಂದಿ ಪ್ರಾಣ ಕಳೆದುಕೊಂಡಿದ್ದರು.

Related Posts

Leave a Reply

Your email address will not be published. Required fields are marked *