ಬ್ಯಾಂಕ್‌ಗಳು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಸ್ಥಳೀಯ ಭಾಷಾ ಜ್ಞಾನದ ಆಧಾರದಲ್ಲೇ ಅವರ ವೃತ್ತಿಪರತೆ ಅಳೆಯಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸ್ಥಳೀಯ ಭಾಷೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ನೇಮಕಾತಿ ಹಾಗೂ ಮಾನವ ಸಂಪನ್ಮೂಲ ನೀತಿಗಳಲ್ಲಿ ಬದಲಾವಣೆಗೂ ತರುವಂತೆಯೂ ಸಚಿವೆ ಸೂಚಿಸಿದ್ದಾರೆ. 12ನೇ ಎಸ್‌ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಂದು ಶಾಖೆಯಲ್ಲಿ ನೇಮಿಸಲಾಗುವ ಎಲ್ಲಾ ಸಿಬ್ಬಂದಿಗೆ ಅಲ್ಲಿನ ಜನ ಆಡುವ ಭಾಷೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು. ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬರದಿದ್ದರೂ ಶಾಖೆಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿರುವವರು ಆ ರಾಜ್ಯದ ಭಾಷೆಯನ್ನು ಅರಿತಿರುವುದು ಕಡ್ಡಾಯ. ಇದೇ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಎಂದಿದ್ದಾರೆ.
ಬ್ಯಾಂಕಿನ ಬೆಳವಣಿಗೆಗಾಗಿ ಸ್ಥಳೀಯ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯ. ತಂತ್ರಜ್ಞಾನ ಅಗತ್ಯವಾಗಿದ್ದರೂ ಎಲ್ಲಾ ಕೆಲಸಗಳಿಗೆ ಅವನ್ನೇ ಅವಲಂಬಿಸುವುದು ಸಲ್ಲದು. ಕೆಲವು ವೇಳೆ ಸಿಬ್ಬಂದಿ ಖುದ್ದಾಗಿ ಜನರೊಂದಿಗೆ ಮಾತನಾಡುವುದು ಅಗತ್ಯ. ಹಿಂದಿ, ಇಂಗ್ಲಿಷ್‌ಗಳನ್ನು ಬಲ್ಲವರಾಗಿದ್ದರೂ ಮಾತೃಭಾಷೆಯಲ್ಲಿ ಮಾತನಾಡಿದಾಗ ಗ್ರಾಹಕರಿಗೆ ಅತ್ಯಾನಂದವಾಗುತ್ತದೆ. ಸ್ಥಳೀಯ ಭಾಷೆ ಆಡುವವರನ್ನು ಬ್ಯಾಂಕ್ ಶಾಖೆಗಳ ಹುದ್ದೆಗೆ ನಿಯೋಜಿಸಬೇಕು ಎಂದು ಹೇಳಿದ್ದಾರೆ.
ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಸಂವಹನ ಸಮಸ್ಯೆಯಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಬಾರತದಲ್ಲಿ ಆಗಾಗ ಗ್ರಾಹಕರ ಆಕ್ರೋಶ ಭುಗಿಲೆದ್ದು ಪ್ರತಿಭಟನೆಗಳೂ ಕೂಡ ನಡೆದಿವೆ. ಬ್ಯಾಂಕ್‌ಗಳಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದವರನ್ನು ನೇಮಿಸುತ್ತಿರುವ ಬಗ್ಗೆ ಹಲವೆಡೆ ಆಕ್ರೋಶ ವ್ಯಕ್ತವಾಗಿತ್ತು.


