Menu

ತುಮಕೂರು ವಿವಿಯ ‘ಜ್ಞಾನಸಿರಿʼ ಕ್ಯಾಂಪಸ್‌ ಲೋಕಾರ್ಪಣೆಗೊಳಿಸಿದ ರಾಜ್ಯಪಾಲ ಗೆಹ್ಲೋಟ್‌

ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರು  ತುಮಕೂರು ಜಿಲ್ಲೆಯ ಬೀದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವವಿದ್ಯಾಲಯದ ‘ಜ್ಞಾನಸಿರಿ ಕ್ಯಾಂಪಸ್ ಹಾಗೂ ವಿವಿಧ ಕಟ್ಟಡಗಳನ್ನು’ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಜ್ಞಾನಸಿರಿ” ಎಂಬ ಹೆಸರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜವನ್ನು ಬೆಳಗಿಸುವ, ನಿರಂತರವಾಗಿ ಹರಿಯುವ ಜ್ಞಾನದ ಪ್ರವಾಹವನ್ನು ಸಂಕೇತಿಸುತ್ತದೆ. ಹೊಸ ಶೈಕ್ಷಣಿಕ ಕಟ್ಟಡ ಮತ್ತು ಕಲಾ ಕಟ್ಟಡವು ವಿಶ್ವವಿದ್ಯಾಲಯದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈ ಕಟ್ಟಡಗಳು ಕಲಿಕಾ ಸೌಲಭ್ಯಗಳನ್ನು ಹೆಚ್ಚಿಸುತ್ತವೆ ಮತ್ತು ಸಂಶೋಧನೆ, ನಾವೀನ್ಯತೆ ಮತ್ತು ಸೃಜನಶೀಲತೆಗೆ ಹೊಸ ದೃಷ್ಟಿಕೋನಗಳನ್ನು ತೆರೆಯುತ್ತವೆ” ಎಂದರು.

“ಈ ನೂತನ ಕಟ್ಟಡಗಳು ಬೋಧನೆ, ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಮತ್ತಷ್ಟು ಬಲಪಡಿಸುವ ಆಧುನಿಕ ಸೌಲಭ್ಯಗಳನ್ನು ಹೊಂದಿವೆ. ಇದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ಒದಗಿಸುತ್ತದೆ. ಈ ಕಟ್ಟಡಗಳು ಹೊಸ ಶಕ್ತಿ, ಹೊಸ ನಿರ್ದೇಶನ ಮತ್ತು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ. ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಸ್ಥಾಪನೆ ಶ್ಲಾಘನೀಯವಾಗಿದೆ. ಈ ಕೇಂದ್ರವು ರಾಷ್ಟ್ರೀಯ ಸೇವೆಗೆ ಬದ್ಧರಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡುತ್ತದೆ. ಇಲ್ಲಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ದೇಶದ ಆಡಳಿತ, ಶಿಕ್ಷಣ, ವಿಜ್ಞಾನ ಮತ್ತು ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಭರವಸೆ ವ್ಯಕ್ತಪಡಿಸಿದರು.

“ಭಾರತ ಇಂದು ಸ್ವಾವಲಂಬನೆಯತ್ತ ಸಾಗುತ್ತಿದೆ.”ಸ್ವಾವಲಂಬಿ ಭಾರತದ” ಕನಸನ್ನು ನನಸಾಗಿಸಲು, ದೇಶವು “ಮೇಕ್ ಇನ್ ಇಂಡಿಯಾ” ನಂತಹ ಯೋಜನೆಯ ಮೂಲಕ ತನ್ನ ಪ್ರತಿಭೆ, ನಾವೀನ್ಯತೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ದಿಕ್ಕಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಡಿಜಿಟಲ್ ಇಂಡಿಯಾ ಮೂಲಕ, ನಮ್ಮ ದೇಶವು ಪಾರದರ್ಶಕತೆ ಮತ್ತು ಸಮಾನತೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ಯೋಜನೆಗಳು ಶಿಕ್ಷಣ ಮತ್ತು ಆಡಳಿತವನ್ನು ಪ್ರತಿಯೊಬ್ಬ ನಾಗರಿಕನ ಬೆರಳ ತುದಿಗೆ ತಂದಿದೆ. ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡಿದೆ ” ಎಂದು ತಿಳಿಸಿದರು.

“ಡಿಜಿಟಲ್ ಸಬಲೀಕರಣ ಮತ್ತು ಸ್ವಾವಲಂಬನೆಯ ಈ ಸಂಗಮವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ನಮ್ಮನ್ನು ಮುನ್ನಡೆಸುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಯುವ ಪೀಳಿಗೆಯಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ರಾಷ್ಟ್ರ ನಿರ್ಮಾಣದ ಮನೋಭಾವವನ್ನು ಬೆಳೆಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿರುವ ಈ ವಿಶ್ವವಿದ್ಯಾಲಯವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ಜ್ಞಾನ, ಸಂಶೋಧನೆ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಶ್ರೀಮಂತ ಸಂಪ್ರದಾಯಗಳನ್ನು ಹೊಂದಿದೆ. ಈ ಸಾಧನೆಗಾಗಿ ವಿಶ್ವವಿದ್ಯಾನಿಲಯ ಕುಟುಂಬದ ಎಲ್ಲ ಸದಸ್ಯರನ್ನು ಅಭಿನಂದನೆಗಳು” ಎಂದರು.

“ವಿಶ್ವವಿದ್ಯಾಲಯದ ಹೊಸ “ಜ್ಞಾನಸಿರಿ” ಕ್ಯಾಂಪಸ್, ಹೊಸದಾಗಿ ನಿರ್ಮಿಸಲಾದ ಶೈಕ್ಷಣಿಕ ಕಟ್ಟಡ, ಕಲಾ ಕಟ್ಟಡ ಮತ್ತು ಪರೀಕ್ಷಾ ಪೂರ್ವ ತರಬೇತಿ ಕೇಂದದ ಉದ್ಘಾಟನೆಯು ಜ್ಞಾನ, ಸೃಜನಶೀಲತೆ ಮತ್ತು ಪ್ರಗತಿಯ ಹೊಸ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ಈ ಹೊಸ ರಚನೆಗಳ ಸಮರ್ಪಣೆಯು ಮುಂಬರುವ ಪೀಳಿಗೆಗೆ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಈ ಕಟ್ಟಡಗಳು ಜ್ಞಾನ, ಸಂಸ್ಕೃತಿ ಮತ್ತು ಪ್ರಗತಿಯ ಕೇಂದ್ರಗಳಾಗಲಿ ಮತ್ತು ಇಲ್ಲಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲಿ” ಎಂದು ಕರೆ ನೀಡಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್, ಉನ್ನತ ಶಿಕ್ಷೆಣ ಸಚಿವ ಡಾ.ಎಂ.ಸಿ.ಸುಧಾಕರ್, ನವದೆಹಲಿಯಲ್ಲಿ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಬಿ.ಸುರೇಶ್ ಗೌಡ, ಕುಲಪತಿ ಪ್ರೊಫೆಸರ್ ಎಂ.ವೆಂಕಟೇಶ್ವರಲು ಹಾಗೂ ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *