ಪಾಟ್ನಾ: ಭಾರೀ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭೆಗೆ ಗುರುವಾರ ನಡೆದ ಮತದಾನದಲ್ಲಿ ಶೇ.60.13ರಷ್ಟು ಮತದಾನವಾಗಿದ್ದು, ಕಳೆದ 20 ವರ್ಷಗಳಲ್ಲೇ ಗರಿಷ್ಠ ಮತದಾನದ ದಾಖಲೆ ಬರೆದಿದೆ.
ಕೇಂದ್ರ ಚುನಾವಣಾ ಆಯೋಗ ಈ ಮಾಹಿತಿ ನೀಡಿದ್ದು ಸಂಜೆ 5 ಗಂಟೆವರೆಗೆ ಬಿಹಾರದಲ್ಲಿ ಒಟ್ಟಾರೆ ಶೇ.60.13ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.
ಬಿಹಾರ ವಿಧಾನಸಭೆಯ 121 ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದ ಮತದಾನ ನಡೆದಿದೆ. ಬೆಳಿಗ್ಗೆಯಿಂದಲೇ ಚುರುಕಿನ ಮತದಾನವಾಗಿದ್ದು, ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ಮತ್ತು ಆರ್ ಜೆಡಿ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ಪೈಪೋಟಿ ಏರ್ಪಟ್ಟಿದೆ.
ಆರ್‌ಜೆಡಿ ನಾಯಕ ಮತ್ತು ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ , ಸಿಎಂ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಮತ ಚಲಾಯಿಸಿದ್ದಾರೆ.
ಹಲವು ರಾಜಕೀಯ ನಾಯಕರಿಂದ ಮತದಾನ ತೇಜಸ್ವಿ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಸೇರಿದಂತೆ ಅವರ ಕುಟುಂಬ ಸದಸ್ಯರೊಂದಿಗೆ ಪಟ್ನಾದ ಪಶುವೈದ್ಯಕೀಯ ಕಾಲೇಜಿನ ಬೂತ್‌ನಲ್ಲಿ ಮತ ಚಲಾಯಿಸಿದರು.
ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಲಖಿಸರೈನಲ್ಲಿರುವ ಆಯಾ ಬೂತ್‌ಗಳಲ್ಲಿ ಮತ ಚಲಾಯಿಸಿದರು. ಆದರೆ ವಿಜಯ್ ಕುಮಾರ್ ಸಿಂಗ್ ಮತ ಚಲಾವಣೆಗೆ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅವರ ಕಾರಿನ ಮೇಲೆ ಸ್ಥಳೀಯರು ಚಪ್ಪಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ.
ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಲಾಲನ್ ಪಾಟ್ನಾದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಸಚಿವ ನಿತಿನ್ ನಬಿನ್ ತಮ್ಮ ಪತ್ನಿ ದೀಪ್ಮಲಾ ಶ್ರೀವಾಸ್ತವ್ ಅವರೊಂದಿಗೆ ಪಟ್ನಾದ ದಿಘಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಗಾಯಕ, ರಾಜಕಾರಣಿ, ಆರ್‌ಜೆಡಿಯ ಖೇಸರಿ ಲಾಲ್ ಯಾದವ್, ಸರನ್ ಜಿಲ್ಲೆಯ ಎಕ್ಮಾದಲ್ಲಿ ಮತ ಚಲಾಯಿಸಿದರು. ಬಿಜೆಪಿ ನಾಯಕ ಬಿಖು ಭಾಯ್ ದಲ್ಸಾನಿಯಾ ಕೂಡ ಮುಂಜಾನೆ ಮತ ಚಲಾಯಿಸಿದರು.
ಬಿಹಾರದ 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಸಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದ್ದು, ಕೆಲವು ಸ್ಥಳದಲ್ಲಿ ಭದ್ರತಾ ಕಾರಣದಿಂದ 5ಕ್ಕೆ ಮತದಾನ ಮುಕ್ತಾಯ ಮಾಡಲಾಗುತ್ತಿದೆ.


