ಕಬ್ಬು ಬೆಳೆಗೆ ಗರಿಷ್ಠ 3500 ರೂ. ನಿಗದಿಪಡಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಬ್ಬು ಪ್ರತಿ ಟನ್ ಗೆ ಗರಿಷ್ಠ 3200 ರೂ. ನಿಗದಿಪಡಿಸಿರುವುದಾಗಿ ಘೋಷಿಸಿದೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ತುರ್ತು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.
ಕಬ್ಬು ಶೇ. 11.25 ರಿಕವರಿ ಬಂದರೆ 3,200 ರೂ. ಹಾಗೂ ಶೇ.10.25 ರಿಕವರಿ ಬಂದರೆ 3100 ರೂ. ಗಳನ್ನು (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ಮನವೊಲಿಸಿದ್ದಾರೆ.
ಕಬ್ಬು ಬೆಳೆಗೆ ದರ ನಿಗದಿ ಕುರಿತು 82 ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಪ್ರತಿಭಟನಾನಿರತ ರೈತರನ್ನು ಮಾತುಕತೆಗೆ ಸಿಎಂ ಆಹ್ವಾನಿಸಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ನಡುವೆ ಕೇವಲ 200-300 ರೂ. ವ್ಯಾತ್ಯಾಸ ಇದೆ ಎಂದು ಅವರು ಹೇಳಿದರು.
ದಿನಗಳಿಂದ ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ನನಗೆ ಸ್ಪಷ್ಟ ಮಾಹಿತಿ ಇದೆ. ಹಾಗಾಗಿ ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು ಎಂದರು.
ಸಕ್ಕರೆ ರಫ್ತು ನಿಯಮದಲ್ಲಿ ಕೇಂದ್ರದ ನೀತಿ ಮತ್ತು FRP ನಿಗಧಿಯಲ್ಲಿ ಕೇಂದ್ರದ ತೀರ್ಮಾನದಿಂದ ಆಗಿರುವ ಅನಾಹುತದ ಕುರಿತು ಪ್ರಧಾನಿ ಜೊತೆ ಚರ್ಚಿಸಲು ಸಂಪುಟ ನಿರ್ಣಯ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.


