ಭಾರತದ ಸ್ಪಿನ್ ದಾಳಿಗೆ ನಾಟಕೀಯ ಕುಸಿತ ಅನುಭವಿಸಿದ ಆಸ್ಟ್ರೇಲಿಯಾ ತಂಡವನ್ನು 48 ರನ್ ಗಳಿಂದ ಮಣಿಸಿದ ಭಾರತ ತಂಡ 5 ಪಂದ್ಯಗಳ ಟಿ-20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಕ್ವೀನ್ಸ್ಲ್ಯಾಂಡ್ನ ಕೆರಾರ ಓವಲ್ ಮೈದಾನದಲ್ಲಿ ನಡೆದ 4ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 8 ವಿಕೆಟ್ ಗೆ 167 ರನ್ ಗಳಿಸಿದರೆ, ಆಸ್ಟ್ರೇಲಿಯಾ ತಂಡ 18.2 ಓವರ್ ಗಳಲ್ಲಿ 119 ರನ್ ಗೆ ಆಲೌಟಾಯಿತು.
ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆಸ್ಟ್ರೇಲಿಯಾ ತಂಡ ನಾಯಕ ಮಿಚೆಲ್ ಮಾರ್ಷ್ ಮತ್ತು ಮ್ಯಾಥ್ಯೂ ಶಾರ್ಟ್ ಆಕ್ರಮಣಕಾರಿ ಆಟದೊಂದಿಗೆ ಉತ್ತಮ ಆರಂಭ ಒದಗಿಸಿದರು. ಮ್ಯಾಥ್ಯೂ ಶಾರ್ಟ್ 2 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 25 ರನ್‌ಗಳಿಸಿ ಔಟಾದರೆ ನಂತರ ಬಂದ ಜೋಶ್ ಇಂಗ್ಲಿಸ್ 12 ರನ್ ಮತ್ತು ಮಿಚೆಲ್ ಮಾರ್ಷ್ 30 ರನ್‌ಗಳಿಗೆ ವಿಕೆಟ್‌ಗಳನ್ನು ಕಳೆದುಕೊಂಡರು.
ಟಿಮ್ ಡೇವಿಡ್ ಮತ್ತು ಜೋಶ್ ಫಿಲಿಪ್ ಕ್ರಮವಾಗಿ 14 ಮತ್ತು 10 ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಗ್ಲೆನ್ ಮ್ಯಾಕ್ಸ್‌ವೆಲ್ 2, ಮಾರ್ಕಸ್ ಸ್ಟೊಯಿನಿಸ್ 17 ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಯಾವುದೇ ರನ್ ಗಳಿಸಲಿಲ್ಲ. 70 ರನ್ಗಳ ಬಳಿಕ ಆಸೀಸ್ ಸತತ ವಿಕೆಟ್‌ಗಳನ್ನು ಕಳೆದುಕೊಂಡಿತು.
ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಪಡೆದರು. ಇದರೊಂದಿಗೆ ಭಾರತ 48 ರನ್‌ಗಳಿಂದ ಗೆದ್ದು ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಭಾರೀ ನಿರೀಕ್ಷೆ ಮೂಡಿಸಿದ್ದ ಶರ್ಮಾ ಕೇವಲ 28 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಶಿವಂ ದುಬೆ 22 ರನ್ ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 20 ರನ್ ಗಳಿಸಿ ಔಟಾದರು. ಉಪನಾಯಕ ಶುಭಮನ್ ಗಿಲ್ 46 ರನ್ ಗಳಿಸಿ ವಿಕೆಟ್ ಒಪ್ಪಿಸಿ ಅರ್ಧಶತಕದ ಅವಕಾಶ ಕಳೆದುಕೊಂಡರು.
ಕೆಳ ಕ್ರಮಾಂಕದಲ್ಲಿ ತಿಲಕ್ ವರ್ಮಾ 5 ರನ್ ಗಳಿಸಿ ನಿರಾಸೆ ಮೂಡಿಸಿದರೆ, ಜಿತೇಶ್ ಶರ್ಮಾ 3, ವಾಷಿಂಗ್ಟನ್ ಸುಂದರ್ 12 ರನ್ ಗಳಿಸಿದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದ ಅಕ್ಷರ್ ಪಟೇಲ್ 21 ರನ್ ಕೊಡುಗೆ ನೀಡಿದರು.


