ಇಡಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ ಎಂದು ಬಮುಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ನಿನ್ನೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮಹತ್ವದ್ದಾಗಿದೆ. ಇ.ಡಿ ಸಂಸ್ಥೆ ಹಸ್ತಕ್ಷೇಪ, ಕಾರ್ಯವೈಖರಿ ಹಾಗೂ ಎಲ್ಲೆ ಮೀರಿ ವರ್ತನೆ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳಿಂದ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ಇ.ಡಿ. ಸಂಸ್ಥೆ ರಾಜಕೀಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಕಳೆದ ವಾರ ಮದ್ರಾಸ್ ಹೈಕೋರ್ಟ್ ಕೂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ರಾಜಕೀಯ ಪ್ರೇರಿತ ದಾಳಿ ಮಾಡಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯಾದರೂ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ಧಿ ರಾಜಕಾರಣ ಮಾಡಲಿ. ದೇಶದ ಅಭಿವೃದ್ಧಿ, ಯುವಕರ ಭವಿಷ್ಯ ನಿರ್ಮಾಣ ಮಾಡುವ ಬಗ್ಗೆ, ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಚಿಂತನೆ ಮಾಡಲಿ ಎಂದು ಒತ್ತಾಯಿಸುತ್ತೇನೆ ಎಂದರು.
ಇಡಿಯಿಂದ ರಾಜಕೀಯ ನಾಯಕರುಗಳಿಗೆ ಡ್ಯಾಮೇಜ್ ಆಗುತ್ತಿದೆಯೇ ಎಂದು ಕೇಳಿದಾಗ, “ರಾಜಕೀಯದಲ್ಲಿ ಎಲ್ಲವನ್ನು ಸಹಿಸಲು ಸಿದ್ಧರಾಗಿರುತ್ತಾರೆ. ಕೆಲವರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಸದೆಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರ ಆಗಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಕ್ಕೆ ಗೌರವ ಸಿಕ್ಕಂತಾಗಿದೆ ಎಂದು ಭಾವಿಸುತ್ತೇನೆ ಎಂದು ಸುರೇಶ್ ಹೇಳಿದರು.
ನನ್ನ ಮೇಲಿನ ಪ್ರಕರಣವೇ ರಾಜಕೀಯ ಷಡ್ಯಂತ್ರಕ್ಕೆ ಸಾಕ್ಷಿ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಮ್ಮ ಮೇಲಿನ ಇಡಿ ಪ್ರಕರಣ ವಜಾವಾಗಿದ್ದರೂ ಸಿಬಿಐಗೆ ಪತ್ರ ಬರೆಯುವುದು, ಸಿಬಿಐ ಆದಾಯ ತೆರಿಗೆಗೆ ಪತ್ರ ಬರೆಯುವುದು ಹೀಗೆ ಪ್ರತಿ ಹಂತದಲ್ಲೂ ಯಾವುದಾದರೂ ಪ್ರಕರಣದ ಸುಳಿಯಲ್ಲಿ ಸಿಲುಕಿಸಿ ಸದೆಬಡಿಯುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಸರಿ, ತಪ್ಪು ತೀರ್ಮಾನ ಮಾಡಲು ತನಿಖೆ ನಡೆಯುತ್ತಿಲ್ಲ. ಎಲ್ಲಾದರೂ ಒಂದು ಕಡೆ ತಪ್ಪಿಸಿಕೊಂಡರೆ, ಮತ್ತೊಂದು ಕಡೆ ಸಿಲುಕಿಸುವ ಪ್ರವೃತ್ತಿ ಬೆಳೆಸಿಕೊಂಡು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಅನುಮಾನಗಳ ನಿವಾರಣೆಗೆ ಎಸ್ಐಟಿ ರಚನೆ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಲಾಗಿದ್ದು, ಕೆಲವರನ್ನು ರಕ್ಷಣೆ ಮಾಡಲು ಧರ್ಮ ಕ್ಷೇತ್ರವನ್ನು ಗುರಿಯಾಗಿಸಲು ಪ್ರಯತ್ನವಿದೆ ಎಂಬ ಚರ್ಚೆ ನಡೆಯುತ್ತಿದೆ ಎಂದು ಕೇಳಿದಾಗ,“ಧರ್ಮಸ್ಥಳ ಶ್ರೀಕ್ಷೇತ್ರವನ್ನು ರಾಜ್ಯದ ಬಹುತೇಕ ಮಂದಿ ನಂಬಿ ಪೂಜೆ, ಹರಕೆ ಮಾಡಿಕೊಂಡು ಬಂದಿದ್ದಾರೆ. ಕೆಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಲೇ ಬಂದಿದೆ. ಈ ವಿಚಾರದಲ್ಲಿ ಜನರ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಕರ್ತವ್ಯ. ಇದರಿಂದ ಶ್ರೀಕ್ಷೇತ್ರಕ್ಕೂ ಒಳ್ಳೆಯದು. ಕೆಲವರು ಇದನ್ನು ಹಿಂದೂ ವಿರೋಧಿ ನೀತಿ ಎಂಬ ರೀತಿ ಬಿಂಬಿಸುತ್ತಿದ್ದಾರೆ. ಇದು ಹಿಂದೂ ವಿರೋಧಿ ನೀತಿ ಅಲ್ಲ. ಇದು ಹಿಂದೂಗಳ ಪರವಾದ ನೀತಿ. ಹಿಂದೂಗಳಿಗೆ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸಬೇಕಾಗಿದೆ. ಈ ಜವಾಬ್ದಾರಿ ಮಾತನಾಡುತ್ತಿರುವವರು ಸೇರಿದಂತೆ ಎಲ್ಲರ ಮೇಲಿದೆ ಎಂದರು.
ಇದು ಶ್ರೀಕ್ಷೇತ್ರದ ಪಾವಿತ್ರ್ಯತೆ ನಂಬಿಕೆ ಉಳಿಸಿಕೊಳ್ಳುವ ಕೆಲಸವಾಗಿದೆ. ಇದು ರಾಜಕೀಯ ಕೆಸರೆರೆಚಾಟದಿಂದ ಹೊರಗೆ ಬರಬೇಕು. 40 ವರ್ಷಗಳಿಂದ ಪ್ರತಿ ವರ್ಷ ನಾನು ಶ್ರೀಕ್ಷೇತ್ರಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಇಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಯಾರಿಂದ ತಪ್ಪಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಶ್ರೀಕ್ಷೇತ್ರದ ಹೆಸರಿನಲ್ಲಿ ಏನಾದರೂ ಅಪಮಾನ ಆಗಿದ್ದರೆ ಇದನ್ನು ಸರಿಪಡಿಸುವ ಜವಾಬ್ದಾರಿ ಇದರ ಉಸ್ತುವಾರಿಗಳ ಮೇಲೆ ಇದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಅಥವಾ ಅಪಮಾನ ಮಾಡುವ ಪ್ರಶ್ನೆಯಲ್ಲ. ಶ್ರೀಕ್ಷೇತ್ರ ಯಾವುದೇ ಒಂದು ಕುಟುಂಬದ ಆಸ್ತಿಯಲ್ಲ. ಇದನ್ನು ಒಂದು ಕುಟುಂಬ ನೋಡಿಕೊಳ್ಳುತ್ತಿದ್ದರೂ ಎಲ್ಲಾ ಭಕ್ತರಿಗೂ ಸೇರಿದ ಸ್ವತ್ತು. ಶ್ರೀ ಮಂಜುನಾಥನಿಗೆ ಅಪಮಾನವಾದರೆ ನಮಗೂ ಅಪಮಾನವಾದಂತೆ ಎಂದು ಹೇಳಿದರು.
ಬಿಬಿಎಂಪಿಯನ್ನು ಐದು ಪಾಲಿಕೆಯಾಗಿ ವಿಂಗಡಿಸುವ ಬಗ್ಗೆ ಬಿಜೆಪಿ ಹೋರಾಟ ನಡೆಸುವುದರ ಬಗ್ಗೆ ಕೇಳಿದಾಗ,ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಲಿದೆ ಎಂದರು. ಗ್ರಾಮಾಂತರ ಭಾಗಗಳು ಇದರ ವ್ಯಾಪ್ತಿಗೆ ಬರುತ್ತಿವೆ ಎಂದು ಕೇಳಿದಾಗ, ನಗರೀಕರಣ ವೇಗವಾಗಿ ಆಗುತ್ತಿರುವುದರಿಂದ ಎಲ್ಲರಿಗೂ ಮೂಲ ಸೌಕರ್ಯ ಒದಗಿಸಬೇಕು. ನನ್ನ ಕ್ಷೇತ್ರ ಭಾಗದ ಅನೇಕ ಪ್ರದೇಶಗಳಲ್ಲಿ ಇದು ಹಳ್ಳಿಯೇ, ಪಂಚಾಯ್ತಿಯೇ ಎಂದು ಗೊಂದಲವಾಗುತ್ತದೆ. ಇಂತಹ ಪ್ರದೇಶಗಳಲ್ಲಿ ನಾಗರೀಕರು ಹೆಚ್ಚಿನ ಮೂಲಭೂತ ಸೌಕರ್ಯ ಕೇಳುತ್ತಾರೆ. ಆದರೆ ಗ್ರಾಮ ಪಂಚಾಯ್ತಿಯಿಂದ ಇದನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಹೀಗಾಗಿ ಆಡಳಿತ ನಡೆಸಬೇಕಾದರೆ ಒಬ್ಬ ಆಯುಕ್ತರಿಂದ ಎಲ್ಲವೂ ಸಾಧ್ಯವಿಲ್ಲ. ಉತ್ತಮ ಆಡಳಿತ ನೀಡಬೇಕು ಎಂದು ಸರ್ಕಾರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ತೀರ್ಮಾನ ಕೈಗೊಂಡಿದೆ ಎಂದು ವಿವರಿಸಿದರು.
ಡಿಸಿಎಂ ಹಾಗೂ ಸಿಎಂ ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, ಅವರು ಹೋಗಬಾರದೇ? ಪಕ್ಷದ ನಾಯಕರ ಜೊತೆ ಪಕ್ಷದ ಸಂಘಟನೆ ಸೇರಿದಂತೆ ಅನೇಕ ವಿಚಾರಗಳ ಜೊತೆ ಚರ್ಚೆ ಮಾಡಲಿದ್ದಾರೆ. ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಾದ ಅನುದಾನ, ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಹೋಗುವುದು ಹೊಸತೇನಲ್ಲ ಎಂದು ಸುರೇಶ್ ಹೇಳಿದರು.
ಮೈಸೂರಿನ ಸಾಧನ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ ಎಂದು ಕೇಳಿದಾಗ, ಈ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟೀಕರಣ ನೀಡಿರುವಾಗ ಮತ್ತೆ ಈ ವಿಚಾರ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.