ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ವಿವಿಧೋದ್ದೇಶ ಸಹಕಾರ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನ.19ರಂದು ನಡೆಯಲಿರುವ ಐಸಿಡಿಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ಬುಧವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಚಿವೆ ಮಾತನಾಡಿದರು.
ವಿಶ್ವದಲ್ಲೇ ದೊಡ್ಡದಾದ ಗೃಹ ಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲೇ ಗೃಹಲಕ್ಷ್ಮಿ ಬ್ಯಾಂಕ್ ಕೂಡ ಜನಮನ್ನಣೆ ಗಳಿಸಲು ಅಧಿಕಾರಿಗಳು ಶ್ರಮ ಹಾಕಬೇಕು. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟಕ್ಕೂ ಗೃಹಲಕ್ಷ್ಮಿ ಸೊಸೈಟಿಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಗೃಹಲಕ್ಷ್ಮಿ ಸೊಸೈಟಿ ಮೂಲಕ 3 ಲಕ್ಷ ವರೆಗೆ ಸಾಲ
ಗೃಹಲಕ್ಷ್ಮಿ ಸೊಸೈಟಿ ಮೂಲಕ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಸಾಲ ನೀಡಲಾಗುವುದು. ಸೊಸೈಟಿ ಯಶಸ್ಸಿಗೆ ಎಲ್ಲರ ಸಹಕಾರ, ಜವಾಬ್ದಾರಿ ಇರಬೇಕು. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ, ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಸಂಗ್ರಹಿಸಲಾಗುವುದು. ಗೃಹಲಕ್ಷ್ಮಿ ಯಶಸ್ಸಿಗೆ ಯಾವ ರೀತಿ ಎಲ್ಲರೂ ಶ್ರಮ ವಹಿಸಿದ್ದೀರೋ ಹಾಗೆಯೇ ಗೃಹಲಕ್ಷ್ಮಿ ಸೊಸೈಟಿಯ ಯಶಸ್ಸಿಗೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಕರ್ನಾಟಕದ ಮಹಿಳೆಯರಿಗೆ ಶಕ್ತಿ ತುಂಬುವುದೇ ನನ್ನ ಇಲಾಖೆಯ ಗುರಿ. ಮುಂದಿನ ದಿನಗಳಲ್ಲಿ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಸಚಿವರು ಹೇಳಿದರು.
ಧೈರ್ಯ ತುಂಬಲಿದೆ ಅಕ್ಕ ಪಡೆ
ಮಹಿಳೆಯರಿಗೆ ಹೆಚ್ಚು ಸುರಕ್ಷತೆ ನೀಡುವ ಸಲುವಾಗಿ ಅಕ್ಕ ಪಡೆಯನ್ನು ರಾಜ್ಯಾದ್ಯಂತ ಆರಂಭಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಕ್ಕ ಪಡೆ ಮನೆ ಮಾತಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೋಮ್ ಗಾರ್ಡ್ಸ್, ಎನ್ಸಿಸಿ ವಿದ್ಯಾರ್ಥಿಗಳು ಅಕ್ಕ ಪಡೆಯಲ್ಲಿ ಕಾರ್ಯನಿರ್ವಹಿಸಲಿದೆ. ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಅಕ್ಕ ಪಡೆ ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದು, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಹಾಯ ಮಾಡಲಿದೆ ಎಂದರು.


