ಕಳೆದ ಕೆಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹಾಗೂ ಪೋಷಕ ನಟ ಹರೀಶ್ ರೈ (55) ನಿಧನರಾದರು. ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಓಂ, ನಲ್ಲ, ಕೆಜಿಎಫ್, ಕೆಜಿಎಫ್ 2 ಚಿತ್ರಗಳು ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹರೀಶ್ ರೈ ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಕೃಷಗೊಂಡು ಗುರುತು ಸಿಗದಂತಾಗಿದ್ದರು. ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಹಲವಾರು ನಟ, ನಟಿಯರು ಹರೀಶ್ ರೈ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು.
ಕರಾವಳಿ ಮೂಲದ ಹರೀಶ್ ರೈ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ನಿಜ ಜೀವನದಲ್ಲಿಯೂ ಪ್ರಕರಣ ಒಂದರಲ್ಲಿ ಹರೀಶ್ ರೈ ಜೈಲು ಸೇರಿದ್ದರು. ಹರೀಶ್ ರೈ ಅವರಿಗೆ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು.


