ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ಅನುಮಾಸ್ಪದವಾಗಿ ಮೃತಪಟ್ಟಿದ್ದಾಳೆ.
ನಿಷಾ (21) ಮೃತ ವಿದ್ಯಾರ್ಥಿನಿ. ವಿದ್ಯಾರ್ಥಿ ನಿಲಯದ ಟೆರೆಸ್ ಮೇಲೆ ವನಿಷಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ವನಿಷಾ ಕಾಲೇಜಿಗೆ ಹೋಗುವ ಸಮಯದಲ್ಲಿ ತಿಂಡಿತಿಂದು ಹಾಸ್ಟೆಲ್ ಟೆರೇಸ್ ಮೇಲೆ ಹೋಗಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಟೆರೇಸ್ ಮೇಲೆ ಬಟ್ಟೆ ಹಾಕಲು ಹೋಗಿದ್ದ ವಿದ್ಯಾರ್ಥಿನಿಯರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಮಗಳು ಚೆನ್ನಾಗಿಯೇ ಇದ್ದಳು, ಹತ್ತಿರದಲ್ಲೇ ಇರುವ ಊರಿಗೆ ಬಂದು ಹೋಗುತ್ತಿದ್ದಳು.ಏಕಾಏಕಿ ಮಗಳು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದರೆ ಹೆತ್ತವರಿಗೆ ನಂಬಲು ಆಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂಥ ದೊಡ್ಡ ಸಮಸ್ಯೆ ಅವಳಿಗೆ ಇರಲಿಲ್ಲ ಎನ್ನುತ್ತಾರೆ ಪೋಷಕರು.
ಸಾಯುವ ಹಿಂದಿನ ರಾತ್ರಿ ಮನಿಷಾ ಫೋನಿನಲ್ಲಿ ತಾಯಿ ಜೊತೆ ಮಾತನಾಡಿದ್ದು, ಬೆಳಗ್ಗೆ ಊರಿಗೆ ಬರುತ್ತೇನೆಂದು ಹೇಳಿದ್ದಳು. ಆಕೆ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಬಡತನ ದಲ್ಲೇ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಹಾಸ್ಟೆಲ್ ವಾರ್ಡನ್ ಸ್ವಪ್ನಾ ಎಲ್ಲಾ ವಿದ್ಯಾರ್ಥಿನಿಯರ ಮುಂದೆ ಮನಿಷಾಗೆ ಬೈದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸೋದರ ಮಾವ ಮಂಜುನಾಥ್ ಆರೊಪಿಸಿದ್ದಾರೆ.
ಮನಿಷಾ ಸಾವಿನ ಬಳಿಕ ವಾರ್ಡನ್, ಕುಟುಂಬಸ್ಥರಿಗೆ ಕರೆ ಮಾಡಿ ಮಾತ್ರೆ ತೆಗೆದುಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದಾರೆ. ನೇಣು ಹಾಕಿಕೊಂಡಿರುವ ಸಂಗತಿ ಬಿಟ್ಟು ಮಾತ್ರೆ ಎಂದು ವಾರ್ಡನ್ ಹೇಳಿದ್ದು ಯಾಕೇ ಎನ್ನುವುದು ಮೃತಳ ಸಂಬಂಧಿಕರ ಪ್ರಶ್ನೆ. ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


