ನೀರಾವರಿ ಯೋಜನೆಗಳ ಬಗ್ಗೆ ಒಂದು ದಿನವೂ ರಾಜ್ಯ ಬಿಜೆಪಿ ಸಂಸದರು ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ನಮ್ಮ ರಾಜ್ಯದ ಬಿಜೆಪಿ ಸಂಸದರು ರಾಜ್ಯದ ಹಿತಕ್ಕಾಗಿ ಧೈರ್ಯವಾಗಿ ಹೋರಾಟ ಮಾಡದಿದ್ದರೆ, ಅವರು ನಮಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಈ ವಿಚಾರಣೆ ಮುಗಿಯಲಿ, ಚಳಿಗಾಲದ ಅಧಿವೇಶನದ ವೇಳೆ ಮತ್ತೆ ಬಂದು ಸಭೆ ನಡೆಸುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ರಾಜ್ಯದ ಜಲ ಯೋಜನೆಗಳ ಸಂಬಂಧ ಕಾನೂನು ತಂಡ ಹಾಗೂ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
“ಮೇಕೆದಾಟು ಸೇರಿದಂತೆ ರಾಜ್ಯದ ಜಲ ಯೋಜನೆಗಳು ವಿಳಂಬವಾಗದಂತೆ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸುವ ಬಗ್ಗೆ ಕಾನೂನು ತಂಡದ ಜೊತೆ ಚರ್ಚೆ ಮಾಡಲಾಗಿದೆ” ಎಂದು ತಿಳಿಸಿದರು.
ಸಭೆಯ ಬಗ್ಗೆ ಕೇಳಿದಾಗ, “ಇದೊಂದು ಮಹತ್ವದ ಸಭೆ. ಇಂದಿನ ಸಭೆಯಲ್ಲಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಶ್ಯಾಮ್ ದಿವಾನ್, ಅಡ್ವೊಕೇಟ್ ಜನರಲ್, ಮೋಹನ್ ಕಾತರಾಕಿ ಹಾಗೂ ನಮ್ಮ ಅಧಿಕಾರಿಗಳು ಸೇರಿ ಈ ಸಭೆ ಮಾಡಿದ್ದೇವೆ. ಮೇಕೆದಾಟು ಯೋಜನೆ ಸಂಬಂಧ ವಿನಾ ಕಾರಣ ಸಮಯಾವಕಾಶದ ನೆಪದಲ್ಲಿ ವಿಚಾರಣೆ ಮುಂದೂಡಿಕೊಂಡೇ ಹೋಗಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದೇನೆ. ನ್ಯಾಯಾಲಯದಲ್ಲಿ ವಿಶೇಷ ಪೀಠ ರಚನೆಗೆ ಮುಂದಾಗಿದ್ದು, ಈಗ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದ್ದೇನೆ. ನಮ್ಮ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದೇನೆ” ಎಂದರು.
“ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಈಗಾಗಲೇ ರೈತರಿಗೆ ಭೂ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಹೊಸ ಕಾಯ್ದೆ ಪ್ರಕಾರ ಇದಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕಿದೆ. ಬೇರೆ ರಾಜ್ಯಗಳಲ್ಲಿ ಈ ಪ್ರಾಧಿಕಾರ ರಚನೆ ಆಗಿವೆ. ಬಿಹಾರದಲ್ಲಿ ಪ್ರಾಧಿಕಾರದ ಮೂಲಕ ಸಾವಿರಾರು ಪ್ರಕರಣ ಬಗೆಹರಿಸಲಾಗಿದೆ. ಕಾನೂನು ಉಪಯೋಗಿಸಿಕೊಳ್ಳಬೇಕು. ಮಹದಾಯಿ ಯೋಜನೆ ಸಂಬಂಧ ಕೆಲವು ದಾಖಲೆ ಸಿದ್ಧಪಡಿಸಲು ಸೂಚಿಸಿದ್ದು, ಈ ಬಗ್ಗೆ ಹೆಚ್ಚು ಮಾಹಿತಿ ನೀಡಲು ಆಗುವುದಿಲ್ಲ” ಎಂದು ತಿಳಿಸಿದರು.
ಪದೇ ಪದೆ ವಿಚಾರಣೆ ಬರುತ್ತಿದೆ ಎಂದು ಕೇಳಿದಾಗ, “ಇದೇ ಕಾರಣಕ್ಕೆ ನಾನು ಸೂಚನೆ ನೀಡಿದ್ದೇನೆ. ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸಚಿವರ ಪತ್ರ ನಮ್ಮ ಬಳಿ ಇದೆ. ಈ ಯೋಜನೆ ಅಂದಾಜು ವೆಚ್ಚ 9 ಸಾವಿರ ಕೋಟಿ ಇತ್ತು. ಈಗ 13-14 ಸಾವಿರ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ನಾವು ವಿಳಂಬ ಮಾಡುವಂತಿಲ್ಲ. ನಾವು ತಮಿಳುನಾಡಿಗೆ ನಿಗದಿಯಾಗಿರುವ 177 ಟಿಎಂಸಿ ನೀರನ್ನು ನೀಡುತ್ತೇವೆ. ಅದರಲ್ಲಿ ಅನುಮಾನವಿಲ್ಲ. ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಕೂಡ ಇದೆ. ಹೀಗಾಗಿ ಕಾಲಹಾರಣ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.
ಕೇಂದ್ರ ಸರ್ಕಾರದ ಮೇಲೆ ರಾಜಕೀಯವಾಗಿ ಒತ್ತಡ ಹಾಕುವ ಪ್ರಯತ್ನ ಮಾಡಲಾಗುವುದೇ ಎಂದು ಕೇಳಿದಾಗ, “ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಸಭೆ ಕರೆದರೂ ಅದನ್ನು ಮುಂದಕ್ಕೆ ಹಾಕುತ್ತಾರೆ. ನಾವು ರಾಜ್ಯ ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಸಂಸದರು ಒಂದೂ ದಿನ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಈ ವಿಚಾರಣೆ ಮುಗಿಯಲಿ, ಚಳಿಗಾಲದ ಅಧಿವೇಶನದ ವೇಳೆ ಮತ್ತೆ ಬಂದು ಸಭೆ ನಡೆಸುತ್ತೇನೆ” ಎಂದರು.
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಕೇಳಿದಾಗ, “ಸರ್ಕಾರ ಹಾಗೂ ಸ್ಥಳೀಯ ಸಚಿವರು ಸೇರಿ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಲ್ಲಿನ ಬೆಲೆ, ದರಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ರಾಜ್ಯಕ್ಕೆ ಮರಳಿದ ನಂತರ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ” ಎಂದು ಉತ್ತರಿಸಿದರು.
ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಯಾರನ್ನೂ ಭೇಟಿ ಮಾಡುತ್ತಿಲ್ಲ. ಯಾರ ಜೊತೆಗೂ ಮಾತನಾಡುತ್ತಿಲ್ಲ, ಬಿಹಾರ ಚುನಾವಣೆ, ಮತಗಳ್ಳತನ ವಿಚಾರ ಸಂಬಂಧ ಜೂಮ್ ಸಭೆಯಲ್ಲಿ ಭಾಗವಿಸಿರುವೆ” ಎಂದು ತಿಳಿಸಿದರು.
ಬಿಹಾರಕ್ಕೆ ತೆರಳುವಿರಾ ಎಂದು ಕೇಳಿದಾಗ, “ಹೈಕಮಾಂಡ್ ನಾಯಕರು ಹೋಗಲು ಹೇಳಿದರೆ, ಹೋಗುವೆ” ಎಂದರು.


