Menu

ಎಸ್‌ಐಟಿ ಕಾನೂನುಬದ್ಧವಾಗಿ ಕಾಲಮಿತಿಯೊಳಗೆ ಧರ್ಮಸ್ಥಳ ಪ್ರಕರಣದ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ

ಧರ್ಮಸ್ಥಳ ಪ್ರಕರಣದ  ತನಿಖೆಯನ್ನು ಎಸ್‌ಐಟಿಗೆ ತನಿಖೆಗೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ. ಕಾಲ ಮಿತಿಯಲ್ಲಿ ಕಾನೂಬದ್ದವಾಗಿ ಎಸ್ ಐಟಿ ತನಿಖೆಯಾಗಬೇಕು. ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಸ್ಥಳೀಯರು ಹಾಗೂ ಅಲ್ಲಿ ಬಹಳ ದಿನಗಳವರೆಗೆ ಕೆಲಸ ಮಾಡಿರುವ ಪೊಲೀಸರಿಗೆ ಗೊತ್ತಿರುತ್ತದೆ. ದೂರು ಕೊಟ್ಟವರು ತಮ್ಮ ಮೇಲೆ ಒತ್ತಡ ಇದೆ ಎಂದು ಹೇಳಿದ್ದಾರೆ. ದೂರು ಕೊಟ್ಟವರಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಹೇಳಬೇಕು ಈ ಬಗ್ಗೆ ತನಿಖೆಯಾಗಬೇಕು. ಅಲ್ಲಿ ನಡೆದಿರುವ ಪ್ರಕರಣದ ಬಗ್ಗೆ‌ ಪೊಲಿಸರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ನೋಟಿಸ್‌  ಕೊಟ್ಟಿದ್ದು ದೊಡ್ಡ ಆಘಾತ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಮೇಲೆ ಹಾಕಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಎಸ್‌ಟಿ  ಕೌನ್ಸಿಲ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ಜವಾಬ್ದಾರಿ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ವ್ಯಾಪಾರಸ್ಥ ಮುಖಂಡರನ್ನು ಕರೆದು ಮಾತನಾಡಬೇಕು. ಸಿಎಂ ಹಣಕಾಸು ಸಚಿವರಾಗಿದ್ದು ಅವರು ಇದನ್ನು ಬಗೆಹರಿಸಬೇಕು. ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು ಕಾನೂನು ಬದ್ದವಾಗಿ ತೆರಿಗೆ ಕಟ್ಟಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ  ಡಿಕೆ ಶಿವಕುಮಾರ್ ಗೆ ಎಲ್ಲ ಗೊತ್ತಿದ್ದು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ  ನೋಟಿಸ್‌  ಕೊಟ್ಟಿದ್ಸಾರೆ‌. ಇಲ್ಲಿ ಯಾರೂ ಯಾರ ಬಾಯಿಗೆ ವರೆಸುವ ಪ್ರಶ್ನೆ ಇಲ್ಲ. ಅವರು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬೆಂಗಳೂರು ವಿಭಜನೆ ಮಾಡುವುದರಿಂದ ಅದರ ಮಹತ್ವ ಕಡಿಮೆ ಆಗಬಾರದು. ಬೆಂಗಳೂರಿಗೆ ವಿದೇಶದಲ್ಲಿಯೂ ಇದರ ಮಹತ್ವ ಇದೆ. ವಿಭಜನೆಯಿಂದ ಅಭಿವೃದ್ಧಿಯಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ರಾಜಕೀಯ ಉದ್ದೇಶದಿಂದ ಪ್ರತ್ಯೇಕ ಪಾಲಿಕೆ ಮಾಡುವುದು ಸರಿಯಲ್ಲ. ಈಗಾಗಲೇ ಬಿಬಿಎಂಪಿಗೆ ನೂರಾಹತ್ತು ಹಳ್ಳಿಗಳನ್ನು ಸೇರಿಸಲಾಗಿತ್ತು. ಅವು ಇನ್ನೂ ಅಭಿವೃದ್ಧಿ ಆಗಿಲ್ಲ. ಈಗ ಅವೆಲ್ಲ ಒಂದೇ ಪಾಲಿಕೆಗೆ ಸೇರಿದರೆ ಅವು ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬರುವ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ರಾಜಕೀಯ ಬದಲಾವಣೆ ಆಗುತ್ತದೆ. ಯಾರು ಏನೇ ಹೇಳಿದರೂ  ಆಗುವ ಬೆಳವಣಿಗೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ನುಡಿದರು.

ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ಒಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರನ್ನು ಒಟ್ಟುಗೂಡಿಸುವ ಅಗತ್ಯವಿಲ್ಲ. ಅವರು ಮೊದಲಿನಿಂದಲೂ ಒಟ್ಟಾಗಿದ್ದಾರೆ. ರಾಜಕೀಯಕ್ಕೆ ಬರುವ ಮುಂಚಿನಿಂದಲೂ ಅವರ ಸ್ನೇಹ ಗಾಢವಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *