Wednesday, November 05, 2025
Menu

ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಏಳನೇ ದಿನಕ್ಕೆ

ಪ್ರತಿ ಟನ್ ಗೆ 3500 ರೂ. ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ಪ್ರತಿಭಟನೆ ತೀವ್ರಗೊಂಡಿದ್ದು, ಗುರ್ಲಾಪುರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಕಿವಿಗೊಟ್ಟ ರಾಜ್ಯ ಸರ್ಕಾರ ಪ್ರತಿಭಟನಾ ಸ್ಥಳಕ್ಕೆ ಹಿರಿಯ ಸಚಿವ ಎಚ್.ಕೆ.ಪಾಟೀಲರನ್ನು ಕಳುಹಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಇಂದು ಬೆಳಗಾವಿಗೆ ಎಚ್.ಕೆ.ಪಾಟೀಲ್ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಗುರ್ಲಾಪುರ ಕ್ರಾಸ್ ಗೆ ಭೇಟಿ ನೀಡಲಿರುವ ಸಚಿವ ಎಚ್.ಕೆ.ಪಾಟೀಲ್ ಸರ್ಕಾರದ ಸಂದೇಶವನ್ನು ರೈತರಿಗೆ ತಲುಪಿಸಲಿದ್ದಾರೆ. ಸಚಿವ ಎಚ್.ಕೆ.ಪಾಟೀಲ್ ಸಂಧಾನ ವಿಫಲವಾದರೆ ಮತ್ತಷ್ಟು ಹೆಚ್ಚಲಿದೆ ಕಬ್ಬು ಬೆಳೆಗಾರರ ಕಿಚ್ಚು, ನ.7 ಕ್ಕೆ ಕಿತ್ತೂರು ಕರ್ನಾಟಕ ಭಾಗದ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಮಾಡಲು ತೀರ್ಮಾನ ಮಾಡಲಾಗಿದೆ.
ಜನ್ಮದಿನದ ಸಂಭ್ರಮ ಬದಿಗಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರೈತರ ಜೊತೆ ರಾತ್ರಿ ಕಳೆದು ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಸಾಥ್ ನೀಡಿವೆ. ಇಂದು ರಾಷ್ಟ್ರೀಯ ಹೆದ್ದಾರಿ ತಡೆಯಲು ಕರವೇ ನಾರಾಯಣಗೌಡ ಬಣ ತೀರ್ಮಾನ ಮಾಡಿದೆ. ಬೆಳಗಾವಿಯ ಸುವರ್ಣ ಸೌಧದ ಬಳಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಹೆದ್ದಾರಿ ಬಂದ್ ಹೋರಾಟ ನಡೆಯಲಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಿದ್ದಾರೆ.

ಮತ್ತೊಂದೆಡೆ ಶ್ರೀರಾಮೇಗೌಡ ಬಣದಿಂದ ಪ್ರತಿಭಟನೆ ನಡೆಯಲಿದ್ದು, ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

 

ವಿಜಯಪುರದಲ್ಲೂ ಮುಂದುವರಿದ ಪ್ರತಿಭಟನೆ

ವಿಜಯಪುರ ಡಿಸಿ ಕಚೇರಿ ಆವರಣದಲ್ಲಿ ರೈತರ ಪ್ರತಿಭಟನೆ ಎರಡನೇ ದಿನಕ್ಕೆ ತಲುಪಿದೆ. ಟನ್‌ಗೆ 3500 ಕಬ್ಬಿನ ದರ ನಿಗದಿಪಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಅವಧಿಗೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ರೈತ ವಿರೋಧಿ ಕಾರ್ಖಾನೆ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದರು. ರೈತರ ಪ್ರತಿಭಟನೆಗೆ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ ಸಾಥ್ ನೀಡಿದ್ದಾರೆ. ರೈತ ಮುಖಂಡ ಪಂಚಪ್ಪ ಕಲಬುರ್ಗಿ,ಸಂಗಮೇಶ ಸಗರ ಹಾಗೂ ರಾಹುಲ್ ಕುಬಕಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘ, ಹಸೀರು ಸೇನೆ ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

Related Posts

Leave a Reply

Your email address will not be published. Required fields are marked *