Menu

ಯಕ್ಷಗಾನ ಬಣ್ಣದ ವೇಷಧಾರಿಯಾಗಿ ಖ್ಯಾತರಾಗಿದ್ದ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

ತೆಂಕುತಿಟ್ಟು ಯಕ್ಷಗಾನದಲ್ಲಿ ಬಣ್ಣದ ವೇಷಧಾರಿ ಎಂದು ಖ್ಯಾತರಾಗಿದ್ದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಯಕ್ಷಗಾನ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚು ವರ್ಷ ಸಕ್ರಿಯರಾಗಿದ್ದ ಅವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ರಾವಣ, ಮಹಿರಾವಣ, ಮಹಿಷಾಸುರ, ಶುಂಭ, ಕುಂಭಕರ್ಣ, ಶೂರ್ಪನಖಿ, ಪೂತನಿ, ಅಜಮುಖಿ, ಕಾಕಾಸುರ, ತಾರಕಾಸುರ, ಯಮಧರ್ಮ ಮತ್ತಿತರ ಪುರುಷ ಹಾಗೂ ಹೆಣ್ಣು ಬಣ್ಣದ ವೇಷಗಳಲ್ಲಿ ಸಿದ್ದಕಟ್ಟೆಯವರು ಅಗ್ರಗಣ್ಯರಾಗಿದ್ದರು. ಸ್ಪಷ್ಟ ಮಾತುಗಾರಿಕೆ, ಬಣ್ಣದ ವೇಷಕ್ಕೆ ಹೇಳಿ ಮಾಡಿಸಿದ ಅಂಗ ಸೌಷ್ಟವ, ಧ್ವನಿ ಹಾಗೂ ಬಣ್ಣದ ಮಾಲಿಂಗರಿಂದ ಕಲಿತ ವಿದ್ಯೆ ಅವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಕಂಗೊಳಿಸುವಂತೆ ಮಾಡಿತ್ತು.

ಮಂಗಳೂರು ವಿ.ವಿ.ಯಿಂದ ‘ಯಕ್ಷಮಂಗಳ’ ಪ್ರಶಸ್ತಿ ಸ್ವೀಕರಿಸಿದ್ದ ಅವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಅರ್ಜಿ ಸಲ್ಲಿಸದ ಅವರನ್ನು ಗುರುತಿಸಿ ಎರಡು ವಾರಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯ ‘ಯಕ್ಷಮಂಗಳ ಪ್ರಶಸ್ತಿ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಭ್ರಾಮರಿ ಯಕ್ಷಮಣಿ ಪ್ರಶಸ್ತಿ, ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಹರೇಕಳ ಪಾವೂರು, ಬಿ.ಸಿ. ರೋಡಿನಲ್ಲಿ ಅಲ್ಲದೆ ಇನ್ನೂ ಅನೇಕ ಕಡೆಗಳ ಸಂಘ ಸಂಸ್ಥೆಗಳು ಗೌರವಿಸಿವೆ.

1965 ಡಿ.17ರಂದು ಬಂಟ್ವಾಳ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾರ್-ಗಿರಿಯಮ್ಮ ಪುತ್ರನಾಗಿ ಜನಿಸಿದ್ದ ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದಿದ ಬಳಿಕ ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಹಾಲಿಂಗ ಅವರ ಬಳಿ ವೇಷ, ನಾಟ್ಯ ಮತ್ತು ರಂಗದ ನಡೆಗಳ ಕುರಿತು ಕಲಿತರು, ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ ಹೆಚ್ಚಿನ ತಿಳುವಳಿಕೆ ಪಡೆದುಕೊಂಡಿದ್ದರು.

ಎರಡು ವರ್ಷ ಕಟೀಲು ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ಆರಂಭಿಸಿದ ಬಳಿಕ 8 ವರ್ಷ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಕ 13 ವರ್ಷ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸಿ 18 ವರ್ಷ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

 

Related Posts

Leave a Reply

Your email address will not be published. Required fields are marked *