ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ, ಅಸಹಜ ಸಾವಿನ ಪ್ರಕರಣಗಳ ಸಂಬಂಧ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳು ಈ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಐಜಿ ಎಂ.ಎನ್. ಅನುಚೇತ್, ಡಿಸಿಪಿ ಸೌಮ್ಯಲತಾ ಮತ್ತು ಎಸ್ಪಿ ಜಿತೇಂದ್ರಕುಮಾರ್ ದಯಾಮ್ ತಂಡವನ್ನು ರಚಿಸಲಾಗಿದೆ. ಇಬ್ಬರು ಐಪಿಎಸ್ ಅಧಿಕಾರಿಗಳು ವೈಯಕ್ತಿಕ ಕಾರಣ ಮುಂದಿಟ್ಟುಕೊಂಡು ತನಿಖಾ ತಂಡದಿಂದ ಹೊರಗುಳಿಯಲು ಮುಂದಾಗಿದ್ದಾರೆ, ಅವರು ಈ ಎಸ್‌ಐಟಿಯಿಂದ ತಮ್ಮನ್ನು ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸುವಂತೆ ಕೇರಳದ ಸಿಪಿಐ ಸಂಸದ ಪಿ. ಸಂದೋಶ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ತಾವೇ ಹಲವು ಶವಗಳನ್ನು ಹೂತುಹಾಕಿದ್ದಾಗಿ ದೇವಸ್ಥಾನದ ಮಾಜಿ ನೈರ್ಮಲ್ಯ ಸಿಬ್ಬಂದಿ ಹೇಳಿಕೆ ನೀಡಿರುವ ಬೆನ್ನಲ್ಲೇ ಪತ್ರ ಬರೆದಿರುವ ಸಂಸದ, ಇತ್ತೀಚಿನ ಬೆಳವಣಿಗೆಗಳು ನಿರ್ಲಕ್ಷಿಸಲಾಗದ ವಾಸ್ತವವನ್ನು ಮುನ್ನೆಲೆಗೆ ತಂದಿವೆ. ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿಲ್ಲ ಎಂದು ದೂರಿ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದ್ದಾರೆ.