ಬೆಂಗಳೂರು: ನೋಟಿನ ಮಳೆ ಸುರಿಸುವುದಾಗಿ ಅಮಾಯಕರನ್ನು ವಂಚಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿರುವ ಹಲಸೂರು ಗೇಟ್ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಈ ಹಿಂದೆ ಚಲಾವಣೆಯಿಂದ ಹಿಂಪಡೆಯಲಾದ 2 ಸಾವಿರ ರೂ. ಮುಖಬೆಲೆಯ ಅಸಲಿ ನೋಟುಗಳ ಸೀರೀಸ್ ನಂಬರ್ ತಿರುಚಿರುವ ನಕಲಿ ನೋಟುಗಳ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಅರ್ ಬಿಐ)ದ ವ್ಯವಸ್ಥಾಪಕರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಮೋಹನ್ ಕೆ, ಶ್ರೀನಿವಾಸ್ ಮೂರ್ತಿ, ರಾಜು, ಬಸವರಾಜ್, ಮುನಿಶಾಮಪ್ಪ, ಮಲ್ಲಿಕಾರ್ಜುನ್, ರಾಮಕೃಷ್ಣ, ಪಳ್ಳಿ ಮುರುಳೀಧರ್, ರಾಮಚಂದ್ರ ಹಾಗೂ ಮುಬಾರಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಚಲಾವಣೆಯಿಂದ ಹಿಂಪಡೆಯಲಾದ ಎರಡು ಸಾವಿರ ಮುಖಬೆಲೆಯ 70 ಅಸಲಿ ನೋಟುಗಳ ಸೀರೀಸ್ ನಂಬರ್‌ಗಳನ್ನು ತಿರುಚಿ ಬ್ಯಾಂಕ್‌ಗೆ ಸಲ್ಲಿಕೆಯಾಗಿರುವ ನಕಲಿ ನೋಟುಗಳ ಬಗ್ಗೆ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಆರ್‌ಬಿಐ ವ್ಯವಸ್ಥಾಪಕರು ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಆ ನೋಟುಗಳನ್ನು ಬ್ಯಾಂಕ್‌ಗೆ ಡೆಪಾಸಿಟ್ ಮಾಡಿದ್ದವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕಮಿಷನ್ ಆಸೆಗೆ ಕೃತ್ಯ ಎಸಗಿರುವುದು ಬಯಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸ್ವಾಮೀಜಿಗಳ ವೇಷ ಧರಿಸಿ ಅಮಾಯಕರನ್ನು ಭೇಟಿಯಾಗುತ್ತಿದ್ದ ಬಸವರಾಜ್, ಮಲ್ಲಿಕಾರ್ಜುನ್ ಹಾಗೂ ಮನಿಶಾಮಪ್ಪ 2 ಸಾವಿರ ರೂ. ಮುಖಬೆಲೆಯ ಪ್ರಸ್ತುತ ಚಲಾವಣೆಯಲ್ಲಿರದ ನಿಗದಿತ ಸೀರೀಸ್‌ನ ನೋಟುಗಳನ್ನು (ಉದಾಹರಣೆಗೆ, 2018ನೇ ಸಾಲಿನ ಹೆಚ್ಎಸ್ ಸೀರೀಸ್‌ನ 2 ಸಾವಿರ ಮುಖ ಬೆಲೆಯ 100 ನೋಟುಗಳು) ಕೊಟ್ಟರೆ ಹಣದ ಮಳೆ ಸುರಿಸುವುದಾಗಿ ನಂಬಿಸುತ್ತಿದ್ದರು. ಆ ನೋಟುಗಳು ಸಿಗುವ ಸ್ಥಳವನ್ನೂ ಅವರೇ ಹೇಳುತ್ತಿದ್ದರು.
ನಂಬರ್ ತಿರುಚಿ ಅಂಥ ನೋಟುಗಳನ್ನು ಒದಗಿಸುವ ಕೆಲಸವನ್ನು ಮುಬಾರಕ್ ಮಾಡುತ್ತಿದ್ದ. ಹಣದ ಆಸೆಗೆ ಮೂರರಷ್ಟು ನೀಡಿ ಆ ನೋಟುಗಳನ್ನು ಪಡೆದುಕೊಳ್ಳುತ್ತಿದ್ದ ಅಮಾಯಕರು ಸ್ವಾಮೀಜಿಗಳ ಬಳಿ ಬರುತ್ತಿದ್ದರು. ಆಗ ಒಂದು ಪೂಜೆ ಮಾಡಬೇಕು ಹಾಗೂ ಒಬ್ಬರೇ ಬರಬೇಕೆಂದು ನದಿ, ಕೆರೆಗಳ ಬಳಿ ಕರೆದುಕೊಂಡು ಹೋಗುತ್ತಿದ್ದ ನಕಲಿ ಸ್ವಾಮೀಜಿಗಳು, “ಕೆಲವು ನೋಟುಗಳು ಮುಕ್ಕಾಗಿವೆ, ಅವುಗಳನ್ನು ಹಿಡಿದುಕೊಂಡು ಹೊಳೆಯಲ್ಲಿ ಮುಳುಗಿ ಏಳಬೇಕು” ಎಂದು ಸೂಚಿಸುತ್ತಿದ್ದರು. ನೀರಿನಲ್ಲಿ ಮುಳುಗಿ ಏಳುವಷ್ಟರಲ್ಲಿ ಆ ದುಡ್ಡಿನೊಂದಿಗೆ ನಕಲಿ ಸ್ವಾಮೀಜಿಗಳು ಪರಾರಿಯಾಗುತ್ತಿದ್ದರು.
ಈ ರೀತಿ ವಂಚಿಸಿದ ನೋಟುಗಳನ್ನು ಏಜೆಂಟ್‌ಗಳ ಮೂಲಕ ಡೆಪಾಸಿಟ್ ಮಾಡಿಸಿ, 20, 30 ಸಾವಿರ ರೂ. ಕಡಿಮೆ ಹಣ ಪಡೆದುಕೊಳ್ಳುತ್ತಿದ್ದರು. ಈ ರೀತಿ ಸೀರೀಸ್ ನಂಬರ್ ತಿರುಚಲ್ಪಟ್ಟ 2 ಸಾವಿರ ಮುಖಬೆಲೆಯ 70 ನೋಟುಗಳು ಬ್ಯಾಂಕ್‌ಗೆ ಡೆಪಾಸಿಟ್ ಆಗಿದ್ದವು.
ಆರ್‌ಬಿಐ ಅಧಿಕಾರಿಗಳು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಬೆಂಗಳೂರು, ಯಾದಗಿರಿ, ಹಾವೇರಿ, ಆಂಧ್ರ ಪ್ರದೇಶ, ತಮಿಳುನಾಡಲ್ಲಿ ವಿಸ್ತರಿಸಿಕೊಂಡಿದ್ದ ವಂಚಕ ಜಾಲದ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಗಳಿಂದ 18 ಲಕ್ಷ ಮೌಲ್ಯದ 2 ಸಾವಿರ ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆಯಲಾದ ನೋಟುಗಳು ತಿರುಚಲ್ಪಟ್ಟಿವೆಯೋ ಇಲ್ಲವೋ ಎಂಬುದರ ಕುರಿತು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


