ಬಿಲಾಸ್ಪೂರ್: ಪ್ರಯಾಣಿಕ ರೈಲು ಮತ್ತು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 6 ಪ್ರಯಾಣಿಕರು ಮೃತಪಟ್ಟ ಭೀಕರ ಘಟನೆ ಛತ್ತೀಸ್‌ಗಢದ ಬಿಲಾಸ್ಪುರದ ಲಾಲ್‌ಖಾದನ್‌ನಲ್ಲಿ ಮಂಗಳವಾರ ಸಂಭವಿಸಿದೆ.
ಕೊರ್ಬಾ ಪ್ಯಾಸೆಂಜರ್ ರೈಲು ಮತ್ತು ಸರಕು ಸಾಗಣೆ ರೈಲಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಗೂಡ್ಸ್ ರೈಲಿನ ಮೇಲೆ ಪ್ರಯಾಣಿಕ ರೈಲು ಹರಿದಿದೆ. ದುರ್ಘಟನೆಯಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಡಿಕ್ಕಿಯಿಂದಾಗಿ ಹಲವು ಬೋಗಿಗಳು ಹಳಿತಪ್ಪಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ರೈಲ್ವೆ ಮತ್ತು ಜಿಲ್ಲಾಡಳಿತ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.
ಬಿಲಾಸ್ಪುರ್-ಕಟ್ನಿ ವಿಭಾಗದಲ್ಲಿ ಅಪಘಾತ ಸಂಭವಿಸಿದೆ. ಈ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ. ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಆಡಳಿತವು ತಕ್ಷಣವೇ ರಕ್ಷಣಾ ತಂಡ ಮತ್ತು ವೈದ್ಯಕೀಯ ಘಟಕ ಸ್ಥಳಕ್ಕೆ ರವಾನಿಸಿದೆ. ಇವರಿಗೆ ಪೂರಕ ಸಹಾಯ ಮಾಡಲು ಸ್ಥಳೀಯ ಆಡಳಿತವೂ ಸ್ಥಳಕ್ಕೆ ಆಗಮಿಸಿದೆ. ಜನನಿಬಿಡ ರೈಲು ಮಾರ್ಗವಾದ ಬಿಲಾಸ್ಪುರ್-ಕಟ್ನಿ ವಿಭಾಗದಲ್ಲಿ ಅಪಘಾತ ಸಂಭವಿಸಿದೆ. ಘಟನೆಗೆ ಕಾರಣ ಏನೆಂದು ತಿಳಿದುಕೊಳ್ಳಲು ರೈಲ್ವೆ ಅಧಿಕಾರಿಗಳು ತನಿಖೆ ಪ್ರಾರಂಭಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


