ಲಿಫ್ಟ್ ಒಳಗೆ ಬರಲಿಲ್ಲ ಎಂಬ ಕಾರಣಕ್ಕೆ ನಾಯಿ ಮರಿಯನ್ನು ನೆಲಕ್ಕೆ ಅಪ್ಪಳಿಸಿ ಕೊಂದೆ ಎಂದು ನಾಯಿ ಮರಿ ಕೊಂದ ಮನೆಕೆಲಸದಾಕೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ಗೂಸಿ ಎಂಬ ನಾಯಿ ಮರಿಯನ್ನು ನೆಲಕ್ಕೆ ಅಪ್ಪಳಿಸಿ ಕೊಂದ ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ ಆರೋಪಿ ಮನೆಕೆಲಸದಾಕೆ ಪುಷ್ಪಲತಾಳನ್ನು ಬೆಂಗಳೂರಿನ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಶ್ವಾನದ ಮಾಲೀಕರ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು ಪುಷ್ಪಲತಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ರಾಶಿಕಾ ಎಂಬವರು ತಮ್ಮ ‘ಗೂಸಿ’ ಹೆಸರಿನ ನಾಯಿಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ನೇಮಿಸಿಕೊಂಡಿದ್ದು, ಇದಕ್ಕಾಗಿ ಪುಷ್ಪಲತಾಳಿಗೆ ಮಾಸಿಕ 23 ಸಾವಿರ ರೂ. ಸಂಬಳ ನೀಡುತ್ತಿದ್ದರು.
ಕೃತ್ಯದ ನಂತರ ನಾಯಿ ಸತ್ತು ಹೋಗಿದೆ ಎಂದು ಮಾಲೀಕರಿಗೆ ಸುಳ್ಳು ಕಥೆ ಹೇಳಿ ಆಕೆಯನ್ನು ನಂಬಿಸಲು ಯತ್ನಿಸಿದ್ದಾಳೆ. ನಾಯಿಯ ಸಾವಿನ ಬಗ್ಗೆ ಮಾಲೀಕರಿಗೆ ಅನುಮಾನ ಮೂಡಿದ್ದು, ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪುಷ್ಪಲತಾಳ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ
ದೃಶ್ಯಗಳಲ್ಲಿ ನಾಯಿಯನ್ನು ಕೊಲೆ ಮಾಡುತ್ತಿರುವ ಸ್ಪಷ್ಟ ಚಿತ್ರಣ ಕಂಡುಬಂದಿದೆ. ತಕ್ಷಣ ರಾಶಿಕಾ, ಆರೋಪಿತೆ ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಾಯಿಯನ್ನ ಎಷ್ಟು ಎಳೆದ್ರೂ ಲಿಫ್ಟ್ ಒಳಗೆ ಬರಲಿಲ್ಲ. ಹೀಗಾಗಿ ಕೋಪಗೊಂಡು ನೆಲಕ್ಕೆ ಬಡಿದಿದ್ದಾಗಿ ಆರೋಪಿತೆ ಪುಷ್ಪಲತಾ ಹೇಳಿದ್ದಾಳೆ.


