ಬೆಂಗಳೂರಿನಲ್ಲಿ ಶೂನ್ಯ ಬಡ್ಡಿ ಆಸೆ ತೋರಿಸಿ ಗ್ರಾಹಕರಿಗೆ ಚಿನ್ನ ಅಡಮಾನ ಸಾಲ ನೀಡಿದ ನಕಲಿ ಕಂಪನಿಯು ಅಡಮಾನವಿಟ್ಟಿದ್ದ ಚಿನ್ನದ ಸಮೇತ ನಾಪತ್ತೆಯಾಗಿದೆ.
ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನ, ಬೆಳ್ಳಿಯೊಂದಿಗೆ ನಕಲಿ ಕಂಪನಿಯವರು ಪರಾರಿಯಾಗಿದ್ದು, ಅಪರಾಧ ಪತ್ತೆ ದಳ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರಣ್ಯಪುರದ ಎಮಿರೇಟ್ ಎಂಬ ಕಂಪನಿ ಚಿನ್ನ ಅಡಮಾನ ಇಟ್ಟವರಿಗೆ 11 ತಿಂಗಳು ಬಡ್ಡಿ ಇಲ್ಲದೆ ಸಾಲ ಕೊಡುತ್ತಿತ್ತು, ಚಿನ್ನಾಭರಣದ ಮೌಲ್ಯದ 50 ರಿಂದ 60% ಸಾಲ ಕೊಡಲಾಗುತ್ತಿತ್ತು. ಅಡಮಾನವಿಟ್ಟ 11 ತಿಂಗಳವರೆಗೆ ಚಿನ್ನ ಬಿಡಿಸಿಕೊಳ್ಳಲು ಅವಕಾಶವಿರಲಿಲ್ಲ. ಬಡ್ಡಿ ಇಲ್ಲವಲ್ಲ ಎಂದು ಚಿನ್ನ ಅಡಮಾನವಿಟ್ಟು ಸಾಕಷ್ಟು ಜನ ಸಾಲ ಪಡೆದಿದ್ದರು. 11 ತಿಂಗಳ ನಂತರ ಕಂಪನಿ ಬಳಿ ಹೋಗಿ ನೋಡಿದಾಗ ಚಿನ್ನದ ಜೊತೆ ಆರೋಪಿಗಳು ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಈ ಬಗ್ಗೆ ಗ್ರಾಹಕರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು, ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಸಲಾಮ್, ಅಜಿತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಕೇರಳ ಹಾಗೂ ಮಂಗಳೂರಿನಲ್ಲಿ ಇದೇ ರೀತಿ ಹಲವರಿಗೆ ವಂಚಿಸಿದ್ದ ಬಂಧಿತರಿಂದ 1.8 ಕೋಟಿ ಮೌಲ್ಯದ 1 ಕೆಜಿ 450 ಗ್ರಾಂ ಚಿನ್ನಾಭರಣ, ಐದು ಕೆಜಿ ಬೆಳ್ಳಿ, ಚಿನ್ನ ಕರಗಿಸುವ ಯಂತ್ರ ವಶಕ್ಕೆ ಪಡೆಯಲಾಗಿದೆ.


