ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕಾರಿನಲ್ಲಿ ಗೆಳೆಯನ ಜೊತೆ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ನಾತಕೋತ್ತರ ಪದವಿ ಓದುತ್ತಿದ್ದ 20 ವರ್ಷದ ಯುವತಿ ಮತ್ತು ಆಕೆಯ ಸ್ನೇಹಿತ ನಿಲ್ದಾಣದ ಹಿಂಭಾಗ ಇರುವ ಬೃಂದಾವನ ನಗರದಲ್ಲಿ ಕಾರನ್ನು ಪಾರ್ಕಿಂಗ್ ಮಾಡಿದ್ದರುಮೂವರು ದುಷ್ಕರ್ಮಿಗಳು ಅಲ್ಲಿಗೆ ಬಂದು ಕಾರಿನ ವಿಂಡ್‌ಶೀಲ್ಡ್ ಒಡೆದು ಯುವತಿಯ ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿ ಆಕೆಯನ್ನು ಬೆದರಿಸಿ ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಮೂವರು ಒಬ್ಬರಾದ ಮೇಲೆ ಒಬ್ಬರು ಸಾಮೂಹಿಕ ಅತ್ಯಾ*ಚಾರ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆಕೆಯ ಬಾಯ್‌ಫ್ರೆಂಡ್ ಪೀಲಮೇಡು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರು ರಾತ್ರಿ ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಯುವತಿಯನ್ನು ಪತ್ತೆ ಮಾಡಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಅವರು ಬಳಸಿದ ದ್ವಿಚಕ್ರ ವಾಹನ ಕಳವು ಮಾಡಿದ್ದಾಗಿತ್ತು.
ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಗುಂಡು ಹಾರಿಸಿ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್, ಗುಣ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ. ಬಂಧಿತರು ಮಧುರೈ ಜಿಲ್ಲೆಯವರಾಗಿದ್ದು, ದಿನಗೂಲಿ ಕಾರ್ಮಿಕರು. ಕೊಯಮತ್ತೂರಿನಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು.
ಸಂತ್ರಸ್ತೆ ಮಧುರೈ ಮೂಲದವರಾಗಿದ್ದು, ಕೊಯಮತ್ತೂರಿನಲ್ಲಿ ಓದುತ್ತಿದ್ದು, ಹಾಸ್ಟೆಲ್‌ನಲ್ಲಿ ತಂಗಿದ್ದಳು. ಆಕೆ ಆಘಾತಗೊಂಡಿದ್ದು, ಸ್ನೇಹಿತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅಪರಾಧಿಗಳನ್ನು ಬಂಧಿಸಲು ಏಳು ವಿಶೇಷ ತಂಡಗಳನ್ನು ರಚಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎ ಸರವಣ ಸುಂದರ್ ಹೇಳಿದ್ದಾರೆ.


