ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪುನರ್ ಪರಿಶೀಲಿಸುವಂತೆ ಆರೋಪಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ರಾಜ್ಯ ಸರ್ಕಾರದ ಪರ ವಕೀಲ ಅನಿಲ್ ನಿಶಾನಿ ಪ್ರತಿಕ್ರಿಯೆ ನೀಡಿದ್ದು, ಪವಿತ್ರ ಗೌಡ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ನ್ಯಾ. ಪರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಅರ್ಜಿ ಪ್ರತಿ ನೀಡಿದರೆ ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆನ್ನುವುದು ತಿಳಿಯಲಿದೆ ದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ದೋಷಾರೋಪ ಹೊರಿಸಿದೆ. ಎಲ್ಲಾ ಆರೋಪಿಗಳು ಸುಳ್ಳು ’ ಎಂದು ಉತ್ತರಿಸುವ ಮೂಲಕ ದೋಷಾರೋಪವನ್ನೇ ನಿರಾಕರಿಸಿದರು. ಸಾಕ್ಷ್ಯ ವಿಚಾರಣೆಗೆ ವಕೀಲರು ಮಾಡಿದ ಮನವಿ ಪರಿಗಣಿಸಿದ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಸಾಕ್ಷಿಗಳ ಪಟ್ಟಿ ಪರಿಶೀಲಿಸಿದ ಬಳಿಕ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ಒಬ್ಬೊಬ್ಬರೇ ಸಾಕ್ಷಿಗಳಿಗೆ ಕೋರ್ಟ್ ಸಮನ್ಸ್ ನೀಡಲಿದೆ. ದರ್ಶನ್ ಕೇಸ್ನಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದು ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಲಿದೆ. ಎಲ್ಲ ಸಾಕ್ಷಿಗಳನ್ನೂ ಆರೋಪಿಗಳ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ಸಿಆರ್‌ಪಿಸಿ 313 ಅಡಿಯಲ್ಲಿ ಆರೋಪಿಗಳ ಹೇಳಿಕೆಯನ್ನೂ ಕೋರ್ಟ್ ದಾಖಲಿಸಲಿದೆ. ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ವಾದಮಂಡನೆ ಆಲಿಸಲಿರುವ ಕೋರ್ಟ್ ಬಳಿಕ ಅಂತಿಮವಾಗಿ ತೀರ್ಪು ಪ್ರಕಟಿಸಲಿದೆ.
ಪ್ರಮುಖ ಸಾಕ್ಷಿಗಳ ಸಾಕ್ಷ್ಯ ವಿಚಾರಣೆ ಮುಗಿಯುವವರೆಗೆ ದರ್ಶನ್ಗೆ ಜಾಮೀನು ಸಿಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ವಿಚಾರಣೆ ಮುಗಿಯಲು ಹಲವು ತಿಂಗಳು ಸಮಯ ಹಿಡಿಯಲಿದೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಅವಕಾಶವಿರುವ ಪ್ರಕರಣ ಆಗಿರುವುದರಿಂದ ದರ್ಶನ್ ಭವಿಷ್ಯವನ್ನು 57ನೇ ಸಿಸಿಹೆಚ್ ಕೋರ್ಟ್ ನಿರ್ಧರಿಸಲಿದೆ.


