ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಪಾಲಿಕೆಗಳನ್ನು ರಚನೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಪ್ರಕಟಿಸಿದ್ದು, ಸರ್ಕಾರ ಈ ಮಹಾನಗರ ಪಾಲಿಕೆಗಳ ಗಡಿಯನ್ನು ಗುರುತು ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯನ್ನು ಆಗಸ್ಟ್ 10ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯಾಗಿ ಮಾರ್ಪಾಡು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಆಗಸ್ಟ್ 11ರಿಂದ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡಿದ ವಿಚಾರವಾಗಿ ಚರ್ಚೆ ನಡೆಸಿ ಬಿಲ್ ಪಾಸ್ ಮಾಡಲು ಸರ್ಕಾರ ಸಿದ್ಧತೆ ಮಾಡಿದೆ. ಈ ಪಾಲಿಕೆಗಳ ರಚನೆ ಬಗ್ಗೆ ಆಕ್ಷೇಪಣೆ ಇದ್ದರೇ ಸಾರ್ವಜನಿಕರು ಸಲಹೆ ನೀಡುವಂತೆ ಸರ್ಕಾರ ಸೂಚಿಸಿದೆ.
ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಬೆಂಗಳೂರು ಉತ್ತರ ಮಹಾನಗರ ಪಾಲಿಕೆ, ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ, ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ, ಬೆಂಗಳೂರು ಪೂರ್ವ ಮಹಾನಗರ ಪಾಲಿಕೆಗಳಾಗಿ ವಿಭಜಿಸಲಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024ರ ಅಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲಾಗಿದೆ.
ಅಧಿಕಾರ ವಿಕೇಂದ್ರೀಕರಣದ ಸಲುವಾಗಿ ಬಿಬಿಎಂಪಿಯನ್ನು 7ರ ವರೆಗೆ ಎಷ್ಟು ಭಾಗಗಳಾಗಿ ಬೇಕಿದ್ದರೂ ವಿಂಗಡಿಸುವ ಕುರಿತು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಿತಿಯು ಶಿಫಾರಸು ಮಾಡಿತ್ತು. ಪಾಲಿಕೆಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆಯೂ ಹೆಚ್ಚಳ ಮಾಡಬೇಕು. ಪ್ರತಿ ಪಾಲಿಕೆಗೂ 100ರಿಂದ 125 ವಾರ್ಡ್‌ಗಳನ್ನು ರಚನೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.