ಕೇರಳದ ನರ್ಸ್ ನಿಮಿಷಾ ಪ್ರಿಯಾ ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪ್ರಕರಣದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 14ಕ್ಕೆ ಮುಂದೂಡಿದೆ. ಮರಣದಂಡನೆಯನ್ನು ತಡೆಯಲು ರಾಜತಾಂತ್ರಿಕ ಮತ್ತು ಕಾನೂನು ಪ್ರಯತ್ನಗಳಿಗೆ ಹೆಚ್ಚಿನ ಸಮಯವನ್ನು ನೀಡಲಾಗಿದೆ.
ಜುಲೈ 16 ರಂದು ಜಾರಿಗೊಳಿಸಲು ನಿಗದಿಯಾಗಿದ್ದ ಮರಣದಂಡನೆಯು ಭಾರತೀಯ ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಮುಂದೂಡಿಕೆಯಾಗಿದೆ. ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಭಾರತ ಸರ್ಕಾರ ಆಕೆಯನ್ನು ಉಳಿಸಲು ತಮಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದೆ.
ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ನ 38 ವರ್ಷದ ನರ್ಸ್ ನಿಮಿಷಾ ಪ್ರಿಯಾ, 2017 ರಲ್ಲಿ ಯೆಮೆನ್ ಪ್ರಜೆಯನ್ನು ಕೊಲೆ ಮಾಡಿ 2020 ರಲ್ಲಿ ಅವರಿಗೆ ಯೆಮೆನ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಅವರು ಪ್ರಸ್ತುತ ಇರಾನ್ ಬೆಂಬಲಿತ ಹೌತಿ ಬಂಡುಕೋರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದಲ್ಲಿ ಬಂಧನದಲ್ಲಿದ್ದಾರೆ.
ಪ್ರಿಯಾಳ ತಾಯಿ ಪ್ರೇಮಕುಮಾರಿ ಕಳೆದ ವರ್ಷನ್ನ ಮಗಳ ಬಿಡುಗಡೆಗಾಗಿ ಮನವಿ ಮಾಡಲು ಯೆಮೆನ್ಗೆ ಪ್ರಯಾಣ ಬೆಳೆಸಿದ್ದರು. ಕೇರಳದ ಸುನ್ನಿ ಧರ್ಮಗುರು ಒಬ್ಬರು ಪ್ರಮುಖ ಯೆಮೆನ್ ಧಾರ್ಮಿಕ ವಿದ್ವಾಂಸರನ್ನು ಸಂಪರ್ಕಿಸಿ ಮಧ್ಯಪ್ರವೇಶ ಕೋರಿದರು. ಯೆಮೆನ್ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಔಪಚಾರಿಕ ರಾಜತಾಂತ್ರಿಕ ಸಂಬಂಧಗಳ ಕೊರತೆಯಿಂದಾಗಿ ಅಡೆತಡೆಗಳಾಗುತ್ತಿವೆ.
ಪ್ರಿಯಾಳನ್ನು ರಕ್ಷಿಸಲು ಕೇಂದ್ರವು ರಾಜತಾಂತ್ರಿಕ ಮಾರ್ಗಗಳನ್ನು ಸಕ್ರಿಯವಾಗಿ ಅನುಸರಿಸಬೇಕೆಂದು ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ವಿದೇಶದಲ್ಲಿರುವ ಭಾರತೀಯ ನಾಗರಿಕರನ್ನು ಉಳಿಸಲು ಸರ್ಕಾರ ಬದ್ಧವಾಗಿದೆಯಾದರೂ ಯೆಮೆನ್ನಲ್ಲಿ ಭಾರತದ ಪ್ರಭಾವ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಮಿಷಾ ಪ್ರಿಯಾ ಕೊಲೆ ಮಾಡಿರುವ ಬಿಜಿನೆಸ್ ಪಾರ್ಟ್ನರ್ ತಲಾಲ್ ಅಬ್ದೋ ಮೆಹದಿಯ ಕುಟುಂಬಕ್ಕೆ ಬ್ಲಡ್ ಮನಿ ನೀಡಲು ಆಕೆಯ ಕುಟುಂಬ ಸಿದ್ಧವಿದ್ದರೂ ಆತನ ಕುಟುಂಬ ಒಪ್ಪುತ್ತಿಲ್ಲ.