ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನೆಂಬ ಆರೋಪ ಎದುರಿಸುತ್ತಿದ್ದ ರಾಮು ಎಂಬ 27 ವರ್ಷದ ಯುವಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಯುವ ಮೊದಲು ಆತ ವಾಯ್ಸ್ ನೋಟ್ ರೆಕಾರ್ಡ್ ಮಾಡಿಟ್ಟಿದ್ದು, ತನ್ನ ಮೇಲಿನ ಆರೋಪ ಸುಳ್ಳು. ಎಲ್ಲದಕ್ಕೂ ಆ ಶಾಲೆಯ ಪಿಟಿ ಮಾಸ್ಟರ್ ಕಾರಣ. ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು ಯಾರಿಂದ ಎಂಬುದನ್ನು ಡಿಎನ್ಎ ಟೆಸ್ಟ್ ಮೂಲಕ ಪತ್ತೆಹಚ್ಚಬೇಕು ಎಂದು ಹೇಳಿಕೊಂಡಿದ್ದಾನೆ.
ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿರುವುದರಿಂದ ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ, ಹುಡುಗಿಯನ್ನು ಮಾತನಾಡಿಸಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಶಾಲೆಯ ಪಿಟಿ ಟೀಚರ್ ಇದಕ್ಕೆ ಕಾರಣ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಯ್ಸ್ ನೋಟ್ನಲ್ಲಿ ಹೇಳಿದ್ದಾನೆ. ಅಕ್ಟೋಬರ್ 31ರಂದು ವಾಯ್ಸ್ ನೋಟ್ ಹಾಕಿ ಯುವಕ ನಾಪತ್ತೆಯಾಗಿದ್ದು, ಬೆಟ್ಟದ ತುಂಗಾ ನಾಲೆಯಲ್ಲಿ ಯುವಕನ ದೇಹ ಪತ್ತೆಯಾಗಿದೆ.
ಮದುವೆಯಾಗು ಎಂದ ಯುವತಿ ಪ್ರಿಯಕರನಿಂದಲೇ ಕೊಲೆ
ತಮಿಳುನಾಡಿನ ಈರೋಡ್ನಲ್ಲಿ ಮದುವೆಯಾಗು ಎಂದಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಕೊಲೆಗೈದು ಗುಂಡಿ ತೋಡಿ ಮುಚ್ಚಿ ಹಾಕಿದ್ದಾನೆ. ಬಾಳೆ ತೋಟವೊಂದರಲ್ಲಿ 35 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಹೂತಿಟ್ಟಿರುವುದು ಪತ್ತೆಯಾಗಿದ್ದು, ಆಕೆಯೊಂದಿಗೆ ಸಂಬಂಧ ಹೊಂದಿದ್ದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಣಬೆ ಸಂಗ್ರಹಿಸಲು ಹೊಲಕ್ಕೆ ಹೋದ ಸ್ಥಳೀಯರು ರಕ್ತಸಿಕ್ತ ಚಾಕು ಮತ್ತು ಮಣ್ಣಿನಲ್ಲಿ ಕೂದಲನ್ನು ಕಂಡು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಬಂದು ಮೂರು ಅಡಿ ಆಳದ ಗುಂಡಿಯಿಂದ ಶವ ಹೊರತೆಗೆದಿದ್ದಾರೆ.
ಮೃತರನ್ನು ಅಪ್ಪಕುಡಲ್ ಪಟ್ಟಣದ ಬ್ಯೂಟಿಷಿಯನ್ ಸೋನಿಯಾ ಎಂದು ಗುರುತಿಸಲಾಗಿದೆ. ಆಕೆ ನವೆಂಬರ್ 1 ರಿಂದ ಕಾಣೆಯಾಗಿದ್ದು, ಕುಟುಂಬವು ನಾಪತ್ತೆ ದೂರು ದಾಖಲಿತ್ತು. ಶವ ಪತ್ತೆಯಾದ ಬಾಳೆ ತೋಟದ ಮಾಲೀಕ ಮೋಹನ್ ಕುಮಾರ್ ಜೊತೆ ಆಕೆ ಸಂಪರ್ಕ ಹೊಂದಿರುವ ದಾಖಲೆಗಳು ಲಭಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆ ಮಹಿಳೆ ತನ್ನನ್ನು ಮದುವೆಯಾಗುವಂತೆ ಕೇಳುತ್ತಲೇ ಇದ್ದಳು, ಅದಕ್ಕೆ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.


