Menu

ಸುರಂಗ ರಸ್ತೆ ಯೋಜನೆಯಿಂದ ಆರ್ಥಿಕ ಸ್ಥಿತಿ ಪಾತಾಳಕ್ಕೆ: ಆರ್‌ ಅಶೋಕ ಆಕ್ರೋಶ

ಸುರಂಗ ರಸ್ತೆ ಯೋಜನೆಯ ಮೂಲಕ ಸಸ್ಯಕಾಶಿ ಲಾಲ್‌ಬಾಗ್‌ಗೆ ಕಾಂಗ್ರೆಸ್‌ ಸರ್ಕಾರ ಗುಂಡಿ ತೋಡುತ್ತಿದೆ. ಈ ಯೋಜನೆಯಿಂದ ನಗರದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಲಾಲ್‌ಬಾಗ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನ ಸಸ್ಯಕಾಶಿಗೆ ಕಾಂಗ್ರೆಸ್‌ ಸರ್ಕಾರ ಗುಂಡಿ ತೋಡುತ್ತಿದೆ. ಈ ಅನ್ಯಾಯದ ವಿರುದ್ಧ ಬಿಜೆಪಿ ಶಾಸಕರ ವತಿಯಿಂದ ಪ್ರತಿಭಟಿಸುತ್ತಿದ್ದೇವೆ. ಪರಿಸರವಾದಿಗಳು, ಲಾಲ್‌ಬಾಗ್‌ ವಿಹಾರಿಗಳು ಇದಕ್ಕೆ ಕೈ ಜೋಡಿಸಿದ್ದಾರೆ. ನಗರದಲ್ಲಿ ಶೇ.90 ರಷ್ಟು ಜನರು ಮಧ್ಯಮ ವರ್ಗ ಹಾಗೂ ಬಡವರಾಗಿದ್ದಾರೆ. ಈ ವರ್ಗವನ್ನು ಕಡೆಗಣಿಸಿ ಶೇ.10 ರಷ್ಟು ವಿಐಪಿಗಳಿಗಾಗಿ ಸುರಂಗ ರಸ್ತೆ ಯೋಜನೆ ರೂಪಿಸಿ 8,000 ಕೋಟಿ ರೂ. ಸಾಲ ಪಡೆಯಲಾಗಿದೆ. ಗುತ್ತಿಗೆದಾರರಿಗೆ ಜಿಬಿಎ 4,000 ಕೋಟಿ ರೂ. ಪಾವತಿಸಬೇಕಿದೆ. ಪಾಲಿಕೆಯ ಆದಾಯವೇ 3,000 ಕೋಟಿ ಇರುವಾಗ, ಸಾಲ ಮಾಡಿ ಯೋಜನೆ ರೂಪಿಸಿದರೆ, ಬೆಂಗಳೂರಿನ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗಲಿದೆ ಎಂದರು.

ಅತಿ ಹಳೆಯ ಶಿಲೆಗಳು ಬೆಂಗಳೂರಿನ ನೆಲದಾಳದಲ್ಲಿದೆ. ಇದರ ಮೇಲೆ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದಾರೆ. ಈ ಶಿಲೆಗಳು ಇರುವುದರಿಂದಲೇ ಭೂಕಂಪವಾಗಲ್ಲ. ಇದಕ್ಕೆ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದಿಂದ ಅನುಮತಿ ಸಿಕ್ಕಿಲ್ಲ. ಲಾಲ್‌ಬಾಗ್‌ ಸಂರಕ್ಷಿತ ಪ್ರದೇಶ ಎಂದು ಫಲಕ ಇಟ್ಟು, ಸರ್ಕಾರವೇ ಅದನ್ನು ಉಲ್ಲಂಘಿಸುತ್ತಿದೆ. 18 ಕಿ.ಮೀ. ಸುರಂಗ ಕೊರೆದರೆ ಟ್ರಾಫಿಕ್‌ ಕಡಿಮೆಯಾಗುವುದಾದರೆ ನಾವೇ ಅದಕ್ಕೆ ಬೆಂಬಲ ನೀಡುತ್ತೇವೆ. ಶೇ.70 ರಷ್ಟು ದ್ವಿಚಕ್ರ ವಾಹನ ಚಾಲಕರಿರುವಾಗ, ಕಾರಿನ ಚಾಲಕರಿಗಾಗಿ ಸುರಂಗ ರಸ್ತೆ ನಿರ್ಮಿಸಲಾಗು ತ್ತಿದೆ. ಈಗಿನ ರಸ್ತೆಗಳ ಮೇಲಿರುವ ಗುಂಡಿಗಳನ್ನು ಮೊದಲು ಸರಿಪಡಿಸಲಿ ಎಂದು ಆಗ್ರಹಿಸಿದರು.

ನಗರದ ರಸ್ತೆ ಗುಂಡಿ ಮುಚ್ಚಲು ಸಿಎಂ ಸಿದ್ದರಾಮಯ್ಯ ಒಂದು ವಾರ ಗಡುವು ನೀಡಿದ್ದರೂ ಅದಕ್ಕೆ ಅಧಿಕಾರಿಗಳು ಸ್ವಲ್ಪವೂ ಬೆಲೆ ನೀಡಿಲ್ಲ. ಈ ಬಗ್ಗೆ ಗಮನ ಕೊಡದೆ ಸುರಂಗ ಯೋಜನೆ ರೂಪಿಸ ಲಾಗುತ್ತಿದೆ. ಯಾವುದೇ ಯೋಜನೆಗೆ ವರ್ಷಗಟ್ಟಲೆ ಅವಧಿ ಬೇಕಾಗುತ್ತದೆ. ಇನ್ನು ಸುರಂಗ ಮಾಡಲು ಹೊರಟರೆ ಮುಂದಿನ ಪೀಳಿಗೆಗೆ ಆ ಯೋಜನೆ ಸಿಗಬಹುದು. ಒಬ್ಬ ಚಾಲಕ ಒಂದು ವಾರ ಸುರಂಗ ರಸ್ತೆಯಲ್ಲಿ ಹೋದರೆ, 20 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಸುರಂಗ ಕೊರೆಯಲು ಯಂತ್ರವನ್ನು ಜರ್ಮನಿ, ಜಪಾನ್‌ನಿಂದ ತರುವ ವೇಳೆಗೆ ಈ ಸರ್ಕಾರ ಇರುವುದಿಲ್ಲ. ಒಂದು ಕಿ.ಮೀ. ಸುರಂಗ ಕೊರೆದು ರಸ್ತೆ ಮಾಡಲು 1,285 ಕೋಟಿ ರೂ. ಬೇಕು. ಇದು ಕೃತಕ ಉಪಗ್ರಹ ಉಡಾವಣೆ ಮಾಡುವುದಕ್ಕಿಂತಲೂ ದುಬಾರಿಯಾಗಿದೆ. ಇದೇ ಹಣದಲ್ಲಿ 5 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಿಸಬಹುದು. ಮೆಟ್ರೊದಲ್ಲಿ ಪ್ರತಿ ದಿನ 60,000 ಜನರು ಪ್ರಯಾಣಿಸ ಬಹುದು. ಮೆಟ್ರೊ ಯೋಜನೆ ವಿಸ್ತರಣೆ ಮಾಡಿದರೆ ನಗರದ ಟ್ರಾಫಿಕ್‌ ಕಡಿಮೆಯಾಗಲಿದೆ ಎಂದರು.

ಖಾಸಗಿ ಜಾಗದಲ್ಲಿ ಮಾಡಿದರೆ ಭೂ ಸ್ವಾಧೀನಕ್ಕೆ ಹೆಚ್ಚು ಪರಿಹಾರ ಕೊಡಬೇಕಾಗುತ್ತದೆ. ಸರ್ಕಾರ ಪಾಪರ್‌ ಆಗಿರುವುದರಿಂದ ಉದ್ಯಾನ ಹಾಗೂ ಕೆರೆಗಳನ್ನು ಹುಡುಕಿ ಅಲ್ಲಿ ಸುರಂಗ ಕೊರೆಯಲು ಗುರುತಿಸಲಾಗಿದೆ. ಈ ಯೋಜನೆ ಜಾರಿಯಾದರೆ ಉದ್ಯಾನ ಹಾಗೂ ಕೆರೆಗಳು ನಾಶವಾಗಲಿದೆ. ಇದು ಅವಾಸ್ತವವಾದ ಯೋಜನೆ ಎಂದು ಅಭಿಪ್ರಾಯಪಟ್ಟರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಉದ್ಯಮಿಗಳಿಗೆ ಹಾಗೂ ಚಿತ್ರ ನಟರಿಗೆ ಧಮಕಿ ಹಾಕಿದ್ದಾರೆ. ಈಗ ಸಂಸದ ತೇಜಸ್ವಿ ಸೂರ್ಯ ಅವರಿಗೂ ಧಮಕಿ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಧಮಕಿ ನಡೆಯಲ್ಲ ಎಂದರು.

Related Posts

Leave a Reply

Your email address will not be published. Required fields are marked *