ಭಟ್ಕಳ ತಾಲೂಕಿನ ತೆರ್ನಮಕ್ಕಿ ಸಬ್ಬತ್ತಿಯ ಮನೆಯಲ್ಲಿ ಜೋಕಾಲಿ ಆಟವಾಡುತ್ತಿದ್ದ 12 ವರ್ಷದ ಬಾಲಕಿ ಪ್ರಣೀತಾ ಜಗನ್ನಾಥ ನಾಯ್ಕಳ ಕುತ್ತಿಗೆಗೆ ವೇಲ್ ಸಿಲುಕಿಕೊಂಡು ಮೃತಪಟ್ಟಿದ್ದಾಳೆ. ಭಾರಿ ಮಳೆಯಿಂದಾಗಿ ಶಾಲೆಗಳಿಗೆ ರಜೆ ಕಾರಣ ಮನೆಯಲ್ಲಿದ್ದ ಬಾಲಕಿ ಜೋಕಾಲಿ ಆಟವಾಡುತ್ತಿದ್ದಾಗ ಈ ದುರಂತ ನಡೆದಿದೆ.
ಜೋಕಾಲಿಗೆ ಕಟ್ಟಲಾಗಿದ್ದ ಚೂಡಿದಾರದ ವೇಲ್ ಆಕಸ್ಮಿಕವಾಗಿ ಆಕೆಯ ಕುತ್ತಿಗೆಗೆ ಸುತ್ತಿಕೊಂಡಿತ್ತು. ಕುತ್ತಿಗೆಗೆ ವೇಲ್ ಬಿಗಿಯಾಗಿ ತೀವ್ರವಾಗಿ ಅಸ್ವಸ್ಥಗೊಂಡಳು. ಕುಟುಂಬದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಪ್ರಣೀತಾ ಅಸು ನೀಗಿದ್ದಾಳೆ.
ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಯ ಕುರಿತು ತನಿಖೆಯನ್ನು ಆರಂಭಿಸಿದ್ದಾರೆ. ಈ ದುರಂತವು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.