Menu

ಬಿಹಾರ ಮತದಾನಕ್ಕೆ ತೆರಳುವವರಿಗೆ ಮೂರು ದಿನ ರಜೆ, ಮಹಾಘಟಬಂಧನ್ ಗೆ ಮತ ನೀಡಿ: ಡಿಕೆ ಶಿವಕುಮಾರ್

ಬಿಹಾರದ ಅಭಿವೃದ್ಧಿಗಾಗಿ ಮಹಾಘಟಬಂಧನ್ ಗೆ ಮತ ನೀಡಿ ಹಾಗೂ ನಿಮ್ಮ ಸಂಬಂಧಿಕರಿಗೂ ನಮಗೆ ಮತ ನೀಡುವಂತೆ ತಿಳಿಸಿ.  ನೀವು ಮತದಾನ ಮಾಡಲು ಊರಿಗೆ ತೆರಳಿ. ನಿಮಗೆಲ್ಲ ಮೂರು ದಿನ ರಜೆ ನೀಡುವಂತೆ ನೀವು ಕೆಲಸ ನಿರ್ವಹಿಸುವ ಸಂಸ್ಥೆಗಳು, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ. ನಿಮ್ಮ ರಾಜ್ಯದ ಅಭಿವೃದ್ಧಿಗಾಗಿ ಮತ ಚಲಾವಣೆ ಮಾಡಬೇಕು. ಮತವನ್ನು ವ್ಯರ್ಥ ಮಾಡಬಾರದು” ಎಂದು ಡಿಸಿಎಂ ಡಿಕೆ ಶಿವಕುಮಾರ್  ಮನವಿ ಮಾಡಿದರು.

ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ನನಗೆ ದೊಡ್ಡ ಸ್ಥಾನ ಬೇಕು ಎಂದು ನೀವೆಲ್ಲರೂ ಹೇಳಿದ್ದೀರಿ. ನನಗೆ ಅದು ಮುಖ್ಯವಲ್ಲ. ಬಿಹಾರದಲ್ಲಿ ಮಹಾಘಟ ಬಂಧನ ಅಧಿಕಾರಕ್ಕೆ ತಂದರೆ ನನಗೆ ಎಲ್ಲಾ ಸ್ಥಾನವನ್ನು ನೀವು ಕೊಟ್ಟಂತೆ. ನಿಮ್ಮ ಒಂದೊಂದು ಮತವೂ ಮಹಾಘಟಬಂದನ್ ಅಧಿಕಾರಕ್ಕೆ ಬರಲು ಮುಖ್ಯವಾದುದು” ಎಂದರು.

“ಈ ಮೊದಲಿನಂತೆ ನಿತೀಶ್ ಕುಮಾರ್ ಅವರ ಕೈಯಲ್ಲಿ ಬಿಹಾರವಿಲ್ಲ. ಅವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಬಿಹಾರದ‌ ಅಭಿವೃದ್ಧಿಗೆ ಲಾಲುಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ” ಎಂದು ಹೇಳಿದರು.

“ರಾಹುಲ್ ಗಾಂಧಿಯವರನ್ನು ಈ ದೇಶದ ಪ್ರಧಾನಿಯಾಗಿ ಮಾಡಬೇಕು. ನೆಹರು ಅವರ ಕುಟುಂಬ ಈ ದೇಶಕ್ಕೆ ತನ್ನದೇ ಆದ ಕೊಡುಗೆ ‌ನೀಡಿದೆ. ಈ ಕಾರಣಕ್ಕೆ ಅವರಿಗೆ ನೀವು ಶಕ್ತಿ ನೀಡಬೇಕು. ತೇಜಸ್ವಿ ಯಾದವ್ ಅವರನ್ನ ಬೆಂಬಲಿಸಬೇಕು” ಎಂದರು.

ಮತದಾನಕ್ಕೆ ತೆರಳುವವರಿಗೆ ಮೂರು ದಿನ ರಜೆ ‌

 

“ಬಿಹಾರದಲ್ಲಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಗಿದೆ. ನಿಮ್ಮ ಊರಿನಲ್ಲಿರುವವರ ಬದುಕನ್ನು ಉಳಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನೀವು ಇಲ್ಲಿ ಬದುಕು ಕಟ್ಟಿಕೊಂಡಿರಬಹುದು. ಆದರೆ ನಿಮ್ಮ ಮತಗಳು ಅಲ್ಲಿರಬಹುದು. ಅಥವಾ ನಿಮ್ಮ ಸಂಬಂಧಿಕರು ಅಲ್ಲಿರಬಹುದು. ಅವರಿಗೆ ಮತದಾನ ಮಾಡಲು ನೀವು ತಿಳಿಸಿ. ನೀವು ಸಹ ಮತದಾನ ಮಾಡಲು ಊರಿಗೆ ತೆರಳಿ. ನಿಮಗೆಲ್ಲರಿಗು ಮೂರು ದಿನ ರಜೆ ನೀಡುವಂತೆ ನೀವುಗಳು ಕೆಲಸ ನಿರ್ವಹಿಸುವ ಸಂಸ್ಥೆಗಳು, ಗುತ್ತಿಗೆದಾರರಿಗೆ ಹಾಗೂ ಕ್ರೆಡಾಯ್ ಸಂಸ್ಥೆಗೆ ಸೂಚಿಸುತ್ತೇನೆ” ಎಂದರು.

“ಬಿಹಾರದವರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಅತ್ಯುತ್ತಮ ‌ಕಟ್ಟಡಗಳನ್ನು ನಿರ್ಮಾಣ ಮಾಡಲು ಸಾಧ್ಯವಿರುತ್ತಿರಲಿಲ್ಲ. ನೀವು ಶ್ರಮಜೀವಿಗಳು. ಮರಗೆಲಸ, ಎಲೆಕ್ಟ್ರಿಕಲ್ ಕೆಲಸಗಳು, ವಿನ್ಯಾಸದ‌‌ ಕೆಲಸಗಳು ಸೇರಿದಂತೆ ಯಾವುದೇ ಕೆಲಸ ನೀಡಿದರು ಅತ್ಯಂತ ಶ್ರದ್ಧೆಯಿಂದ ನಿರ್ವಹಣೆ ಮಾಡುವವರು. ‌ನಿಮ್ಮ ಸಂಘದ ಸಮುದಾಯ ಭವನಕ್ಕೆ ನಿವೇಶನ ನೀಡಲಾಗುವುದು” ಎಂದು ತಿಳಿಸಿದರು.

“ಇನ್ನೊಂದು ತಿಂಗಳಲ್ಲಿ ಇದರ ಬಗ್ಗೆ ಬೇರೆ ರಾಜ್ಯದ ಸಂಘಟನೆಗಳಿಗೆ ನಿವೇಶನಗಳನ್ನು ಮೀಸಲಿಡುವ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ನೀವು ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕು. ಸಂಘದ ಪದಾಧಿಕಾರಿಗಳು ಮುಂದಿನ ವಾರದಲ್ಲಿ ಬಂದು ಭೇಟಿಮಾಡಿ. ಅಸ್ಸಾಂಗೆ ಗಾಯಕ ಜುಬಿನ್ ಅವರ ಸ್ಮರಣೆ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ನಮಗೂ ಚಟುವಟಿಕೆಗಳನ್ನು ನಡೆಸಲು ನಿವೇಶನ ನೀಡಿ ಎಂದು ಮನವಿ ಮಾಡಿದ್ದರು ಎಲ್ಲರಿಗೂ ಸಿಎ ನಿವೇಶನ ನೀಡಲು ಆಲೋಚಿಸಲಾಗುವುದು” ಎಂದರು.

“ಕರ್ನಾಟಕದಲ್ಲಿ ನಾವು ನೀಡಿದ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ‌. ಇಲ್ಲಿ ನೆಲೆಸಿರುವ ನೀವು ಸಹ ನಮ್ಮವರಾಗಿದ್ದೀರಿ. ನೀವು ಸಹ ಗ್ಯಾರಂಟಿ ಯೋಜನೆಗಳ ಫಲವನ್ನು ಪಡೆಯುತ್ತಿರಬಹುದು. ನಮ್ಮ ಮಾದರಿಯನ್ನು ನೋಡಿ ಟೀಕೆ ಮಾಡಿದವರೇ ಈಗ ಕರ್ನಾಟಕ ಮಾದರಿ ಅನುಸರಿಸುತ್ತಿದ್ದಾರೆ. ಬಿಹಾರದಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ‌ಘೋಷಣೆ ಮಾಡಲಾಗಿದೆ” ಎಂದು ಹೇಳಿದರು.

“ನೀವು ಹೊರಗಿನಿಂದ ಬಂದವರು ಎಂದು ನಾವು ಎಂದಿಗೂ ಬೇಧ ಭಾವ ಎಸಗಿಲ್ಲ. ಕೊರೋನಾ ಸಂದರ್ಭದಲ್ಲಿ ಎರಡರಷ್ಟು ಬಸ್ ದರ ಏರಿಕೆ ಮಾಡಿ ಊರಿಗೆ ಮರಳುವವರಿಗೆ ತೊಂದರೆ ನೀಡಲಾಗಿತ್ತು. ಆಗ ನಾನು ಹೋರಾಟ ಮಾಡಿದ‌ ನಂತರ ಕಾರ್ಮಿಕರನ್ನು ಉಚಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಲಾಯಿತು” ಎಂದು ತಿಳಿಸಿದರು.

“ಅತ್ಯಂತ ದೊಡ್ಡ ಇತಿಹಾಸವನ್ನು ಹೊಂದಿರುವ ರಾಜ್ಯ ಬಿಹಾರ. ವಿಶೇಷ ಸಂಸ್ಕೃತಿ ಹೊಂದಿರುವವರು ನೀವು. ನಾವೆಲ್ಲರೂ ಭಾರತೀಯರು. ಕಾಂಗ್ರೆಸ್ ಪಕ್ಷ ಜಾರಿಗೆ‌ ತಂದ ಸಂವಿಧಾನದಿಂದ ನೀವು ನಾವೆಲ್ಲರೂ ಒಟ್ಟಿಗೆ ಬದುಕುತ್ತಿದ್ದೇವೆ” ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕನ್ನಡದಲ್ಲಿ ಮಾಡಿದ ಭಾಷಣವನ್ನು ‌ಬಿಹಾರಿ ಭಾಷೆಗೆ ತರ್ಜುಮೆ ಮಾಡಲು ಹೋದಾಗ “ನಾವು ಬಿಹಾರಿಗಳಲ್ಲ, ಕನ್ನಡದ ಬಿಹಾರಿಗಳು” ಎಂದು ಸಭಿಕರು ಹೇಳಿದರು. “1 ನೇ ತಾರೀಕು ರಾಜ್ಯೋತ್ಸವ ‌ಆಚರಿಸಿದ್ದೇವೆ. ನೀವು ಕನ್ನಡ ಕಲಿತಿರುವುದು ನೋಡಿದರೆ ಸಂತಸವಾಗುತ್ತಿದೆ” ಎಂದು ಶಿವಕುಮಾರ್ ಅವರು ಹೇಳಿದರು.

ಟನಲ್‌ ರಸ್ತೆ ವಿಚಾರವಾಗಿ ಟೀಕಿಸಿದ ತೇಜಸ್ವಿ ಸೂರ್ಯ ಅವರ ತೇಜೋವಧೆ ಮಾಡಲಾಗಿದೆ ಎಂದು ಕೇಳಿದಾಗ, “ನಾನು ಯಾರ ಮೇಲೂ ಸಹ ವೈಯಕ್ತಿಕ ಟೀಕೆ ಮಾಡಿಲ್ಲ. ತೇಜಸ್ವಿ ಸೂರ್ಯ ಅವರ ಮಾತುಗಳು ಎಳಸುತನದಿಂದ ಕೂಡಿದ್ದವು. ಟನಲ್ ರಸ್ತೆ ಬಗ್ಗೆ ಅವರ ಪಕ್ಷದ ಹಿರಿಯ ನಾಯಕರಾದ ನಿತಿನ್ ಗಡ್ಕರಿ ಅವರ ಹೇಳಿಕೆಗಳನ್ನು ಕೇಳಬೇಕು. ಮುಂಬೈ, ಕಾಶ್ಮೀರದಲ್ಲಿನ ಟನಲ್‌ ರಸ್ತೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಟನಲ್ ರಸ್ತೆ ಕೇಂದ್ರ ಸರ್ಕಾರದ ಸಲಹೆ ಕೂಡ ಹೌದು. ಈ ವಿಚಾರದಿಂದ ಬಿಜೆಪಿಯವರ ನಿಜವಾದ ಬಣ್ಣ ಬಯಲಾಗುತ್ತಿದೆ‌. ಬೆಂಗಳೂರಿನ ಅಭಿವೃದ್ಧಿ ವಿರುದ್ದ ಬಿಜೆಪಿಯಿದೆ” ಎಂದರು.

Related Posts

Leave a Reply

Your email address will not be published. Required fields are marked *