ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್‌ನ ಸಂಗೀತ ಸಿಗ್ನಲ್ ಬಳಿ ರೆಡ್ ಸಿಗ್ನಲ್ ಇದ್ದ ಕಾರಣ ನಿಂತಿದ್ದ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದು ಅಂಬುಲೆನ್ಸ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನುಮೃತಪಟ್ಟವರು.
ರೆಡ್ ಸಿಗ್ನಲ್ ಇದ್ದ ಕಾರಣ ಸವಾರ ಬೈಕ್ ನಿಲ್ಲಿಸಿದ್ದಾಗ ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಅಂಬುಲೆನ್ಸ್ ಹಿಂದಿನಿಂದ ಬೈಕ್‌ಗೆ ಗುದ್ದಿದೆ. ಬೈಕ್ ಸಮೇತ 200 ಮೀಟರ್ ಎಳೆದೊಯ್ದಿದೆ. ಪೊಲೀಸ್ ಚೌಕ್ ಹಾಗೂ ಸಿಗ್ನಲ್ ಕಂಟ್ರೋಲ್ ಯುನಿಟ್‌ಗೆ ಗುದ್ದಿ ಅಂಬುಲೆನ್ಸ್ ನಿಂತಿದೆ.
ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಒಳಗೆ ಯಾರೂ ರೋಗಿ ಇರದಿದ್ದರೂ ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದೆ ಬೈಕ್‌ಗೆ ಗುದ್ದಿ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ. ಸ್ಥಳದಲ್ಲಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಅಂಬುಲೆನ್ಸ್‌ಗೆ ಮುತ್ತಿಗೆ ಹಾಕಿದ್ದಾರೆ. ಅನವಶ್ಯಕವಾಗಿ ಆಂಬುಲೆನ್ಸ್ ಸೈರನ್ ಹಾಕಿಕೊಂಡು ಬರ್ತಾರೆ. ಇವರಿಂದ ಇಬ್ಬರ ಪ್ರಾಣ ಹೋಗಿರುವುದಾಗಿ ಸ್ಥಳೀಯರು ಕಿಡಿಕಾರಿದ್ದಾರೆ. ಅಂಬುಲೆನ್ಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.


