Menu

ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲು ಬೇಡಿಕೆಗೆ ಸರ್ಕಾರ ಬದ್ಧವೆಂದ ಸಿಎಂ 

” ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು ಶೇಕಡ 1ರಷ್ಟು ಮೀಸಲಾತಿಯನ್ನು ಯಾವ ರೀತಿಯಲ್ಲಿ ಕಲ್ಪಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.

ಒಳ ಮೀಸಲಾತಿ ಕುರಿತು ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿತು. ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸುಧಾರಣೆಗೆ ಎಸ್ ಸಿ ಪಿ /ಟಿ ಎಸ್ ಪಿ ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದ್ದೇ ನಮ್ಮ ಸರ್ಕಾರ . ಪ್ರತಿಯೊಬ್ಬರಿಗೂ ಪರಿಹಾರ ಸಿಗಲಿ ಎನ್ನುವುದೇ ಸರ್ಕಾರದ ಉದ್ದೇಶ. ಯಾವುದೇ ಜಾತಿಯೊಳಗೆ ಇನ್ನೊಂದನ್ನು ಸೇರಿಸುವ , ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಇದಕ್ಕೊಂದು ಪರಿಹಾರ ಹುಡುಕಿ, ನ್ಯಾಯ ಒದಗಿಸಲಾಗುವುದು” ಎಂದರು.

” ಒಳಮೀಸಲಾತಿ ಕಲ್ಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈಗ ಉಂಟಾಗಿರುವ ಗೊಂದಲಗಳಿಗೂ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ” ಎಂದು  ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಿವೃತ್ತ ನ್ಯಾ. ನಾಗಮೋಹನ್  ದಾಸ್  ಶಿಫಾರಸಿನಂತೆ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ  ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇಕಡ 1ರಷ್ಟು ಮೀಸಲಾತಿ ಕಲ್ಪಿಸಲು ಆದ್ಯತೆ ನೀಡುವಂತೆ , ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ  ಪ್ರತ್ಯೇಕ ನಿಗಮ ರಚನೆ  ಹಾಗೂ ಅಲೆಮಾರಿ ಸಮುದಾಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವ ಕುರಿತಂತೆ ಮುಖ್ಯಮಂತ್ರಿ ಅವರಲ್ಲಿ ನಿಯೋಗ ಮನವಿ ಮಾಡಿತು.

ಸಭೆಯಲ್ಲಿ ಸಚಿವರಾದ ಎಚ್ ಸಿ ಮಹದೇವಪ್ಪ, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಮಾಜಿ ಸಚಿವರಾದ ಎಚ್ ಆಂಜನೇಯ, ವಿವಿಧೆಡೆಗಳಿಂದ ಆಗಮಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *