ಶೃಂಗೇರಿ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದಾರೆ. ಮೃತಪಟ್ಟ ರೈತರನ್ನು ಹರೀಶ್ (44) ಮತ್ತು ಉಮೇಶ್ (40) ಎಂದು ಗುರುತಿಸಲಾಗಿದೆ. ಕೊಟ್ಟಿಗೆಗೆ ಸೊಪ್ಪು ತರಲೆಂದು ಇಬ್ಬರೂ ಕಾಡಿಗೆ ಹೋಗಿದ್ದಾಗ ಆನೆ ದಾಳಿ ನಡೆಸಿ ಈ ದುರಂತ ಸಂಭವಿಸಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು, ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ನಿಷ್ಕ್ರಿಯತೆಯ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಮೃತರ ಕುಟುಂಬಗಳಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ವನ್ಯಜೀವಿ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.ಪ್ರಾಣಿಗಳಿಗೆ ಹಾನಿಯಾದರೆ ಕಾನೂನು ಕ್ರಮ ತೆಗೆದುಕೊಳ್ಳುವ ಸರ್ಕಾರ ಮನುಷ್ಯ ಜೀವಕ್ಕೆ ಯಾವುದೇ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆ ಆವರಣದ ಸಂಪ್‌ಗೆ ಬಿದ್ದು ವಿದ್ಯಾರ್ಥಿ ಸಾವು
ಮಾಲೂರು ತಾಲೂಕು ಕಡದನಹಳ್ಳಿ ಗ್ರಾಮದಲ್ಲಿ ಶಾಲೆ ಆವರಣದಲ್ಲಿದ್ದ ಸಂಪ್‌ಗೆ ಬಿದ್ದು 3ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ನರೇಂದ್ರ (9) ಮೃತ ವಿದ್ಯಾರ್ಥಿ. ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ನರೇಂದ್ರ ಬೆಳಗ್ಗೆ ಶಾಲೆಗೆಂದು ಬಂದು ಬಳಿಕ ನಾಪತ್ತೆಯಾಗಿದ್ದ.
ಗ್ರಾಮದಲ್ಲೆಲ್ಲಾ ಪೋಷಕರು ಹುಡುಕಾಟ ನಡೆಸಿದ ಬಳಿಕ ಶಾಲೆ ಆವರಣದಲ್ಲಿರುವ ಸಂಪ್‌ನಲ್ಲಿ ಶವ ಪತ್ತೆಯಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 


