ವಿಶ್ವಾದ್ಯಂತ ಯುದ್ಧ ನಿಲ್ಲಿಸಿದ ತನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಗೋಗರೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಣ್ವಸ್ತ್ರ ಪರೀಕ್ಷೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ರಷ್ಯಾ ಮತ್ತು ಚೀನಾದ ಅಣು ಅಸ್ತ್ರಗಳ ಪರೀಕ್ಷೆ ಬಳಿಕ ಟ್ರಂಪ್ ರಕ್ಷಣಾ ಸಚಿವಾಲಯಕ್ಕೆ ತಕ್ಷಣ ಅಣ್ವಸ್ತ್ರ ಪರೀಕ್ಷೆ ನಡೆಸುವಂತೆ ಆದೇಶ ನೀಡಿದ್ದಾರೆ.
ಇದು 1992ರಿಂದ ಅಮೆರಿಕ ಹಾಕಿಕೊಂಡ ನಿರ್ಬಂಧವನ್ನು ನೀರುವ ಮೂಲಕ ಜಗತ್ತನ್ನು ಹೊಸ ಶೀತಲ ಸಮರದ ಆತಂಕಕ್ಕೆ ಗುರಿ ಮಾಡಿದೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಗೆ ಕೆಲವೇ ನಿಮಿಷ ಗಳ ಮೊದಲು, ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿ, ಇತರ ದೇಶಗಳ ಪರೀಕ್ಷೆ ಕಾರ್ಯಕ್ರಮಗಳ ಕಾರಣದಿಂದ ನಾನು ನಮ್ಮ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಆದೇಶಿಸಿದ್ದೇನೆ. ಆ ಪ್ರಕ್ರಿಯೆ ತಕ್ಷಣ ಆರಂಭವಾಗುತ್ತದೆ” ಎಂದಿದ್ದಾರೆ.
ಅಂದಾಜು ಪ್ರಕಾರ ರಷ್ಯಾದಲ್ಲೇ ಹೆಚ್ಚು (5,459) ಇದ್ದು, ಅಮೆರಿಕ 5,177ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಚೀನಾ 600ರೊಂದಿಗೆ ಮೂರನೇ ಸ್ಥಾನದಲ್ಲಿದ್ದು, 5 ವರ್ಷಗಳಲ್ಲಿ ಸಮತೋಲನ ಬರುತ್ತದೆ ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದು 33 ವರ್ಷಗಳ ನಂತರ ಅಮೆರಿಕದ ಮೊದಲ ಅಣ್ವಸ್ತ್ರ ಪರೀಕ್ಷೆಯಾಗಲಿದೆ. 1992ರ ಅಕ್ಟೋಬರ್‌ನಲ್ಲಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯೂ. ಬುಷ್ ಅಣ್ವಸ್ತ್ರ ಪರೀಕ್ಷೆಗೆ ಏಕಪಕ್ಷೀಯ ನಿರ್ಬಂಧ ಹಾಕಿದ್ದರು. ಅಮೆರಿಕ ಕಂಪ್ಯೂಟರ್ ಮಾಡೆಲಿಂಗ್ ಮೂಲಕ ಅಣ್ವಸ್ತ್ರಗಳ ಸಾಮರ್ಥ್ಯ ಪರೀಕ್ಷಿಸುತ್ತಾ ಬಂದಿತ್ತು. ಈಗ ನಿರ್ಬಂಧ ಮೀರುವುದು ಅಮೆರಿಕ-ರಷ್ಯಾ-ಚೀನಾ ನಡುವೆ ಸಂಘರ್ಷಕ್ಕೆ ದಾರಿ ಮಾಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್‌ನ ಆದೇಶಕ್ಕೆ ಕಾರಣವಾದದ್ದು ರಷ್ಯಾದ ಇತ್ತೀಚಿನ ಪರೀಕ್ಷೆಗಳು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ಯೂರೆವೆಸ್ಟ್ನಿಕ್ ಅಣು-ಚಾಲಿತ ಕ್ರೂಸ್ ಕ್ಷೇಪಣಿ ಮತ್ತು ಪೊಸೈಡನ್ ಅಣು-ಚಾಲಿತ ನೀರಡಿ ಡ್ರೋನ್‌ಗಳ ಪರೀಕ್ಷೆ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಅಮೆರಿಕದ ಒತ್ತಡಗಳ ನಡುವೆ ಇದು ರಷ್ಯಾದ ಶಕ್ತಿ ಪ್ರದರ್ಶನ.
ಟ್ರಂಪ್‌ನ ಆದೇಶವು ಉಕ್ರೇನ್ ಯುದ್ಧ, ಚೀನಾ-ತೈವಾನ್ ನಡುವೆ ಆತಂಕ ಹುಟ್ಟಿಸಿದ್ದು, ಅಣ್ವಸ್ತ್ರ ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸಿದೆ. ಕಾಂಗ್ರೆಸ್ ರಿಸರ್ಚ್ ಸರ್ವೀಸ್ ಪ್ರಕಾರ, ಪರೀಕ್ಷೆಗೆ 24-36 ತಿಂಗಳುಗಳ ಅವಧಿ ಬೇಕು. ಟ್ರಂಪ್ “ಡಿನ್ಯೂಕ್ಲಿಯರೈಜೇಷನ್” ಬಯಸುತ್ತೇನೆ ಎಂದು ಹೇಳಿದರೂ ಈ ನಡೆಯು ರಷ್ಯಾ-ಚೀನಾವನ್ನು ಆಕ್ರೋಶಗೊಳಿಸಬಹುದು.
ರಷ್ಯಾದ ‘ಪೊಸೈಡನ್’ ಡ್ರೋನ್ ಗಂಟೆಗೆ 130 ಕಿ.ಮೀ. (ಸಾಂಪ್ರದಾಯಿಕ ಸಬ್‌ಮರೀನ್‌ಗಳಿಗಿಂತ ಹೆಚ್ಚು) ವೇಗದಲ್ಲಿ ನೀರಿನಡಿ 1 ಕಿ.ಮೀ.ಗಿಂತ ಹೆಚ್ಚು ಆಳದಲ್ಲಿ ಕಾರ್ಯನಿರ್ವಹಣೆ ಸಾಮರ್ಥ್ಯ ಹೊಂದಿದೆ. 2 ಮೆಗಾಟನ್ ಅಣ್ವಸ್ತ್ರ ಹೊತ್ತು, ಕರಾವಳಿ ನಗರಗಳನ್ನು ರೇಡಿಯೋಆಕ್ಟಿವ್ ತಿರುಗುಬಾಣಗಳೊಂದಿಗೆ ಸುನಾಮಿ ಮೂಲಕ ನಾಶಮಾಡಬಲ್ಲದು. ಯಾವುದೇ ದೇಶಕ್ಕೂ ಪತ್ತೆ ಮಾಡಲು ಸಾಧ್ಯವಿಲ್ಲದ ವಿಸ್ತಾರ ವ್ಯಾಪ್ತಿ ಹೊಂದಿದೆ.

 


