ಮಕ್ಕಳ ರಕ್ಷಣಾ ನಿರ್ದೇಶನಾಲಯವು ಖಾಸಗಿ ವ್ಯಕ್ತಿಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನು ನಿಷೇಧಿಸಿದ್ದರೂ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸಿ. ಮುನಿರಾಜು ನಿಯಮ ಉಲ್ಲಂಘಿಸಿದ್ದಾರೆ.
ನಿಷೇಧದ ನಡುವೆಯೂ ಮುನಿರಾಜು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಕೊತ್ತಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಮುನಿರಾಜು ಸರ್ಕಾರಿ ಶಾಲೆಗೆ ಬಂದು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಂದ ಮುನಿರಾಜುಗೆ ಜೈ ಅಂತ ಜೈ ಕಾರ ಹಾಕಿಸಿಕೊಂಡಿದ್ದಾರೆ.
ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನ ವಿತರಿಸಿ ನಂತರ ಕೇಕ್ ಕತ್ತರಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಮುನಿರಾಜು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ. ನಿಯಮ ಉಲ್ಲಂಘಿಸಿದ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.