Menu

ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಜೆಮಿಮಾ-ಕೌರ್‌: ವಿಶ್ವಕಪ್‌ ಫೈನಲ್‌ಗೆ ಭಾರತ ಲಗ್ಗೆ

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಜೆಮಿಮಾ ರೋಡ್ರಿಗಸ್‌ ಶತಕ ಸಿಡಿಸಿದ್ದು, ಜೆಮಿಮಾ ಅವರ ಏಕದಿನ ವೃತ್ತಿಜೀವನದಲ್ಲಿ ಮೂರನೇ ಶತಕ ಮತ್ತು ವಿಶ್ವಕಪ್ ಇತಿಹಾಸದಲ್ಲಿ ಮೊದಲ ಶತಕವಾಗಿದೆ. 339 ರನ್‌ಗಳ ಗುರಿ ಸಾಧಿಸಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಜೆಮಿಮಾ ರೋಡ್ರಿಗಸ್ (127 ರನ್) ಅಜೇಯರಾಗಿ ಉಳಿದು ಭಾರತವನ್ನು ಗೆಲುವಿನ ದಡ ಸೇರಿಸಿದರು.

ಈ ಶತಕದ ಇನ್ನಿಂಗ್ಸ್ ಜೊತೆಗೆ ಜೆಮಿಮಾ ಅವರು ನಾಯಕಿ ಹರ್ಮನ್ಪ್ರೀತ್ ಕೌರ್ ಅವರೊಂದಿಗೆ ಸ್ಮರಣೀಯ 167 ರನ್‌ಗಳ ಪಾಲುದಾರಿಕೆಯಲ್ಲಿ ಭಾಗಿಯಾದರು.  ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಜೆಮಿಮಾ ಅಜೇಯ 127 ರನ್ ಗಳಿಸಿ, ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇಲ್ಲಿಯವರೆಗೆ ಗಂಭೀರ್ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ್ದ ದಾಖಲೆ ಹೊಂದಿದ್ದರು. 2011 ರ ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಗಂಭೀರ್ 97 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಜೆಮಿಮಾ, ಗಂಭೀರ್ ಅವರನ್ನು ಹಿಂದಿಕ್ಕಿದ್ದಾರೆ.

ಜೆಮಿಮಾ ನಿರ್ಣಾಯಕ ಪಂದ್ಯದಲ್ಲಿ ಶತಕ ಬಾರಿಸಿ ತನ್ನ ಸ್ಥಿರತೆ ಮತ್ತು ಮನೋಧಾರ್ಡ್ಯವನ್ನು ಪ್ರದರ್ಶಿಸಿದರು. ಸತತ ಹತ್ತಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದು ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ಆಗಿದ್ದ ಆಸ್ಟ್ರೇಲಿಯಾ ತಂಡ ಈಕೆಯ ಮುಂದೆ ಮಂಡಿಯೂರಿತು.

ಎರಡು ವಿಕೆಟ್ ಅತಿ ಬೇಗನೆ ಕಳಚಿದಾಗ ಆಘಾತ ಕಾದಿತ್ತು. ಆಸ್ಟ್ರೇಲಿಯಾದ ಲೆಗಿ ಕಿಂಗ್ ಎಸೆತವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಬ್ಯಾಟನ್ನು ವಂಚಿಸಿದ ಚೆಂಡು ಕಾಲಿಗೆ ಬಡಿದಾಗ ಇಡೀ ಆಸ್ಟ್ರೇಲಿಯಾ ತಂಡ ಸಂಭ್ರಮಿಸಿತ್ತು. ಆದರೆ ಅಂಪೈರ್ ಒಪ್ಪಲಿಲ್ಲ, ಆಸ್ಟ್ರೇಲಿಯಾ ತೀರ್ಪನ್ನು ಚಾಲೆಂಜ್ ಮಾಡಿತು. ಚೆಂಡು ವಿಕೆಟ್‌ಗಿಂತ ಹೆಚ್ಚು ಎತ್ತರಕ್ಕೆ ಪುಟಿದಿದ್ದು ಸಾವಬೀತಾಯಿತು. ಮುಂದೆ ಇನ್ನಿಂಗ್ಸ್ ಜೋಡಿಸುತ್ತ ಹೋದರು ಜೆಮಿಯಾ. ನಿರ್ಣಾಯಕ ಹಂತದಲ್ಲಿ ಬೌಲರ್ ನೇರ ತಲೆಯ ಮೇಲೆ ಬಾರಿಸಿ ಹೊಡೆಯಲು ಪ್ರಯತ್ನಿಸಿದ ಜೆಮಿಮಾಳ ಸುಲಭ ಕ್ಯಾಚ್ ಪಂದ್ಯದ ಚಿತ್ರಣ ಬದಲಿಸುವುದರಲ್ಲಿತ್ತು‌‌. ಆಸ್ಟ್ರೇಲಿಯಾ ಆ ಅವಕಾಶವನ್ನು ಡ್ರಾಪ್ ಮಾಡಿ ಪಂದ್ಯವನ್ನೇ ಬಿಟ್ಟುಕೊಟ್ಟಿತ್ತು. ಅಲ್ಲಿಂದ ಜೆಮೀಮಾ ಇತಹಾಸ ಸೃಷ್ಟಿಸಿ, ನಿರ್ಣಾಯಕ ಪಂದ್ಯದಲ್ಲಿ ಶತಕ ಬಾರಿಸಿ ಸ್ಥಿರತೆ ಮತ್ತು ಮನೋಧಾರ್ಡ್ಯ ತೋರಿದರು.

Related Posts

Leave a Reply

Your email address will not be published. Required fields are marked *