ಈ ಸಂದರ್ಭದಲ್ಲಿ ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಗೊಳಿಸುವುದು ನಮ್ಮ ಕರ್ತವ್ಯ. ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸ್ ಅವರ ಭೂಮಿಯಿಂದ, ಸಾಮಾಜಿಕ ನ್ಯಾಯವನ್ನು ಕೇವಲ ಘೋಷಣೆಯಾಗಿ ಅಲ್ಲ, ಜೀವಂತ ರಾಜಕೀಯ ಚೈತನ್ಯವಾಗಿ ಒಪ್ಪಿಕೊಂಡ ಈ ನಾಡಿನಿಂದ ನಿಮಗೆ ಆತ್ಮೀಯ ಸ್ವಾಗತ. ಇಂದು ನಾನು ಇಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಮಾತ್ರವಲ್ಲ, ಸಾಮಾಜಿಕ ನ್ಯಾಯವನ್ನು ನಂಬುವ ಎಲ್ಲರ ಪ್ರತಿನಿಧಿಯಾಗಿ ನಿಂತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ನಡೆದ AICC OBC ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಒಡಕು ಮತ್ತು ಶ್ರೀಮಂತ ವರ್ಗದ ಜನರ ಶಕ್ತಿಗಳು ಸಮಾನತೆ ಮತ್ತು ಭ್ರಾತೃತ್ವ ತತ್ವಗಳ ವಿರುದ್ಧ ಕತ್ತಿಗಳನ್ನು ಹರಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಗೊಳಿಸುವುದು ನಮ್ಮ ಕರ್ತವ್ಯ. ಇದು ಕೇವಲ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಹೋರಾಟವಲ್ಲ. ಇದು ಗೌರವ, ಘನತೆ ಮತ್ತು ಅಧಿಕಾರಕ್ಕಾಗಿ ಹೋರಾಟ. ಗುಂಪು ರಾಜಕೀಯವನ್ನು ಮೀರಿ ಒಪ್ಪಿಗೆಯ ಚೈತನ್ಯದೊಂದಿಗೆ ಈ ಸಂವಾದವನ್ನು ಪ್ರಾರಂಭಿಸೋಣ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ, ‘ಶಿಕ್ಷಣ ಪಡೆಯಿರಿ, ಚೈತನ್ಯ ತುಂಬಿರಿ, ಸಂಘಟಿತರಾಗಿರಿ’ಎಂದರು.
ಭಾರತದ ಸಾಮಾಜಿಕ ರಚನೆಯು ನ್ಯಾಯದ ಮೇಲೆ ಅಲ್ಲ, ಬಹಿಷ್ಕಾರದ ಮೇಲೆ ನಿಂತಿದೆ. ಈ ದೇಶವನ್ನು ತಮ್ಮ ಶ್ರಮದಿಂದ ಕಟ್ಟಿದ OBC ಜನರು, ಜನನದಿಂದಲೇ ಜಾತಿಯ ಕಾರಣಕ್ಕೆ ಶಿಕ್ಷಣ, ಭೂಮಿ ಮತ್ತು ನಾಯಕತ್ವದಿಂದ ವಂಚಿತರಾದರು. ಕೌಶಲ್ಯಪೂರ್ಣ ಸಮುದಾಯಗಳನ್ನು ಕೀಳಾಗಿ ಕಾಣಲಾಗಿ, ಮೇಲ್ಜಾತಿ ಯವರ ಅಧಿಕಾರ ಮತ್ತು ಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಉದ್ದೇಶಪೂರ್ವಕವಾಗಿ ಕೆಳಕ್ಕೆ ತಳ್ಳಲಾಯಿತು. ಇದರಿಂದಾಗಿ ಲೆಕ್ಕವಿಲ್ಲದಷ್ಟು ಮಕ್ಕಳು ಶಾಲೆಯನ್ನೇ ಕಾಣಲಿಲ್ಲ. ಕೈಯಿಂದ ಪಟ್ಟಣಗಳನ್ನು ಕಟ್ಟಿದವರಿಗೆ ಆಡಳಿತದ ಕೊಠಡಿಗಳಿಗೆ ಆಹ್ವಾನವಿರಲಿಲ್ಲ. OBC ಗಳಿಗೆ ಕೇವಲ ಬಹಿಷ್ಕಾರವಷ್ಟೇ ಅಲ್ಲ, ತಮ್ಮ ಅಸ್ತಿತ್ವವೇ ಅಳಿಯುಂತಾಯಿತು ಎಂದು ಹೇಳಿದರು.
ನೇಕಾರನ ಮಗ, ಕುಂಬಾರನ ಮಗ ಅಥವಾ ಕುರಿಗಾಹಿಯ ಮಗನಿಗೆ ಮೇಲ್ಜಾತಿಯ ಭೂಮಾಲೀಕನ ಮಗನ ವಿರುದ್ಧ ಯಾವ ಅವಕಾಶ? ಜನನದಿಂದಲೇ ಆಟದ ನಿಯಮಗಳನ್ನು ಒಡ್ಡಿರುವ ಸಮಾಜದಲ್ಲಿ ಸಮಾನ ಅವಕಾಶದ ಬಗ್ಗೆ ಏನು ಮಾತಾಡುವುದು, ನಾವು ಒಂದು ಭಾರತವನ್ನು ಕಟ್ಟಬೇಕು, ಅಲ್ಲಿ ನೇಕಾರನ ಮಗಳು, ಮೀನುಗಾರನ ಮಗ ಅಥವಾ ಮಡಿವಾಳನ ಮಗ ತಮ್ಮ ಜನನದಿಂದ ಶಿಕ್ಷೆಗೊಳಗಾಗದೆ ಸ್ವತಂತ್ರವಾಗಿ ಕನಸು ಕಾಣಬಹುದು. ಕೆಲಸವನ್ನು ಜಾತಿಯಿಂದ ಅಳೆಯದ, ಇತಿಹಾಸದ ಭಾರವು ಭವಿಷ್ಯವನ್ನು ತೂಗದ ಭಾರತವನ್ನು ಕಟ್ಟಬೇಕು ಎಂದರು.
ಬಸವಣ್ಣನವರ ಅನುಭವ ಮಂಟಪದಲ್ಲಿ, ಅಲ್ಲಮ ಪ್ರಭು, ಮಡಿವಾಳ ಮಾಚಿದೇವ ಮತ್ತು ಅಕ್ಕ ಮಹಾದೇವಿಯಂತಹ ಚಿಂತಕರು “ಕಾಯಕವೇ ಪೂಜೆ” ಮತ್ತು “ಯಾವ ಜಾತಿಯೂ ಶ್ರೇಷ್ಠವಲ್ಲ” ಎಂದು ಘೋಷಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ 1918 ರಲ್ಲಿ ಮಿಲ್ಲರ್ ಸಮಿತಿಯನ್ನು ರಚಿಸಿದರು, ಇದು ಡೇಟಾಆಧಾರಿತವಾಗಿ ಹಿಂದುಳಿದ ವರ್ಗಗಳ ವರ್ಗೀಕರಣವನ್ನು ಮಾಡಿತು. 1921 ರಲ್ಲಿ ಮೈಸೂರು 75% ಮೀಸಲಾತಿಯನ್ನು ಜಾರಿಗೆ ತಂದಿತು, ಇದು ಭಾರತದ ಮೊದಲ ಆಧುನಿಕ ಹಿಂದುಳಿದ ವರ್ಗಗಳ ಏಳಿಗೆ ನೀತಿಯಾಗಿತ್ತು. ಇದು ಭಾರತಕ್ಕೆ ಸ್ವಾತಂತ್ರ್ಯ ಬರುವ 26 ವರ್ಷಗಳ ಮೊದಲೇ ಆಗಿತ್ತು. ಇದು ಸಾಮಾಜಿಕ ನ್ಯಾಯವು ಸಂವಿಧಾನದ ಆದೇಶಕ್ಕಿಂತ ಮೊದಲೇ ನಮ್ಮ ನೈತಿಕ ದಿಕ್ಸೂಚಿಯಾಗಿತ್ತು ಎಂದು ತೋರಿಸುತ್ತದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಮಂಡಲ್ ಆಯೋಗ (1979) ಭಾರತದ ಜನಸಂಖ್ಯೆಯ 50% ಕ್ಕಿಂತ ಹೆಚ್ಚು OBC ಗಳೆಂದು ಗುರುತಿಸಿ, ಸರ್ಕಾರಿ ಉದ್ಯೋಗಗಳಲ್ಲಿ 27% ಮೀಸಲಾತಿಯನ್ನು ಶಿಫಾರಸು ಮಾಡಿತು.
1990 ರಲ್ಲಿ ಇದರ ಜಾರಿಯಾದಾಗ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಅವರ ಸಂಗಡಿಗರು ತೀವ್ರವಾಗಿ ವಿರೋಧಿಸಿದರು, ದೇಶಾದ್ಯಂತ ಪ್ರತಿಭಟನೆ ಮಾಡಿ, 200 ಕ್ಕೂ ಹೆಚ್ಚು ಆತ್ಮಹತ್ಯೆಗಳಿಗೆ ಕಾರಣವಾದರು. ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಗೊಂದಲವನ್ನು ಮೀರಿ, ಮಂಡಲ್ ಆಯೋಗದ 27% ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ತಂದಿತು.
ರಾಜೀವ್ ಗಾಂಧಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಮಟ್ಟದಲ್ಲಿ ಪ್ರಾತಿನಿಧ್ಯದ ಅಡಿಪಾಯವನ್ನು ಹಾಕಿದರು. ಸೋನಿಯಾ ಗಾಂಧಿ ಮತ್ತು ಡಾ. ಮನಮೋಹನ್ ಸಿಂಗ್ ನೇತೃತ್ವದ UPA-1 ಸರ್ಕಾರ 93ನೇ ತಿದ್ದುಪಡಿಯ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ OBC ಗಳಿಗೆ 27% ಮೀಸಲಾತಿಯನ್ನು ಜಾರಿಗೆ ತಂದಿತು.
ಕಾಂಗ್ರೆಸ್ ಸರ್ಕಾರ 1993 ರಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆಯನ್ನು ಜಾರಿಗೆ ತಂದಿತು ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ, 1995 ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆಯನ್ನು ಜಾರಿಗೆ ತಂದೆವು, ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾನದಂಡಗಳ ಆಧಾರದಲ್ಲಿ ಹಿಂದುಳಿದ ಸಮುದಾಯಗಳನ್ನು ಗುರುತಿಸಿ, ರಕ್ಷಿಸಿತು. 2011 ರಲ್ಲಿ UPA- 2 ಆಡಳಿತದಲ್ಲಿ, ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿಯನ್ನು (SECC) ನಡೆಸಲಾಯಿತು. ಆದರೆ ಬಿಜೆಪಿ ಈ ಡೇಟಾವನ್ನು OBC ಗಳ ಕಲ್ಯಾಣಕ್ಕೆ ಸಮರ್ಥವಾಗಿ ಬಳಸಲಿಲ್ಲ. 1960 ರ ದಶಕದಲ್ಲಿ ಡಾ. ಆರ್. ನಾಗನಗೌಡ ಸಮಿತಿಯು ಹಿಂದುಳಿದ ವರ್ಗಗಳ ವರ್ಗೀಕರಣವನ್ನು ಆರಂಭಿಸಿತು. ದೇವರಾಜ ಅರಸ್ ಆಡಳಿತದಲ್ಲಿ ಹಾವನೂರ್ ಆಯೋಗ (1975) ಭಾರತದ ಮೊದಲ ವೈಜ್ಞಾನಿಕ ಮೀಸಲಾತಿ ಚೌಕಟ್ಟನ್ನು ರಚಿಸಿತು. 2015 ರಲ್ಲಿ ನನ್ನ ಆಡಳಿತದಲ್ಲಿ, ಕಾಂತರಾಜ್ ಆಯೋಗವು 1.3 ಕೋಟಿ ಕುಟುಂಬಗಳನ್ನು ಒಳಗೊಂಡ ಭಾರತದ ಅತ್ಯಂತ ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿತು. ಆದರೆ ಬಿಜೆಪಿ 2019 ರಿಂದ 2023 ರವರೆಗೆ ಈ ವರದಿಯನ್ನು ಬಿಡುಗಡೆ ಮಾಡದೆ ಸಾಮಾಜಿಕ ನ್ಯಾಯವನ್ನು ತಡೆಯಿತು ಎಂದು ಸಿಎಂ ಹೇಳಿದರು.
ಸುಪ್ರೀಂ ಕೋರ್ಟ್ ಇತ್ತೀಚೆಗೆ OBC ಮೀಸಲಾತಿಗೆ ಡೇಟಾದ ಅಗತ್ಯವನ್ನು ಮರುಪುಷ್ಟಿಗೊಳಿಸಿತು. ಆದರೆ ನ್ಯಾಯಾಂಗವೊಂದೇ ನ್ಯಾಯವನ್ನು ಒದಗಿಸಲಾರದು, ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತದ ಸಿದ್ಧತೆ ಅಗತ್ಯ. ಕೇಂದ್ರ ಸೇವೆಗಳಲ್ಲಿ OBC ಗಳು ಕೇವಲ 22% ಇದ್ದಾರೆ, ಆದರೆ ಕಾನೂನು 27% ಮೀಸಲಾತಿಯನ್ನು ಆದೇಶಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಾಪ್‌ಔಟ್ ದರ ಹೆಚ್ಚಿದೆ, ಪ್ರವೇಶ ಕಷ್ಟವಾಗಿದೆ. ಬಿಜೆಪಿಯ “ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್” ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಜಾತಿ ಜನಗಣತಿಯನ್ನು ತಡೆದರು, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ದುರ್ಬಲಗೊಳಿಸಿದರು ಎಂದರು.
ಈ ಸಲಹಾ ಸಮಿತಿಯು ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ, ಭಾರತ ಗಣರಾಜ್ಯವನ್ನು ಹೊಸ ನ್ಯಾಯದ ಕಡೆಗೆ ಕೊಂಡೊಯ್ಯಲಿ. AHINDA ಒಂದು ಮತಬ್ಯಾಂಕ್ ಅಲ್ಲ, ಇದು ಭಾರತದ ಆತ್ಮಸಾಕ್ಷಿಯ ಧ್ವನಿ. ಭಾರತದ ಭವಿಷ್ಯವನ್ನು ಬಹಿಷ್ಕಾರದ ಮೇಲೆ ಕಟ್ಟಲಾಗದು. ಅವಕಾಶ, ಘನತೆ ಮತ್ತು ಅಧಿಕಾರದೊಂದಿಗೆ ಎಲ್ಲರೂ ಒಟ್ಟಿಗೆ ಮೇಲೆರಬೇಕು. “ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು” ಮತ್ತು “ಸರ್ವೋದಯ” ತತ್ವದಲ್ಲಿ, ಯಾರೂ ಹಿಂದೆ ಉಳಿಯದ, ಎಲ್ಲರೂ ಒಟ್ಟಿಗೆ ಏಳುವ ಭಾರತವನ್ನು ಕಟ್ಟೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.