ಕಾನೂನು ರೂಪಿಸುವುದು ಜನರ ಸಮಸ್ಯೆಗಳನ್ನು ಬಗೆಹರಿಸಲು, ಆದರೆ ಕಾನೂನುಗಳು ಜನಪರವಾಗಿವೆಯೇ ,ಇಲ್ಲವೇ ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಣೆ ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ “ನೂರು ಕಾನೂನುಗಳು – ನೂರು ಅಭಿಮತಗಳು” ಮೂರು ಸಂಪುಟಗಳ ಲೋಕಾರ್ಪಣೆ ಹಾಗೂ ಕಾನೂನು ಸಂಶೋಧಕರು, ತಜ್ಞರು ರಚಿಸಿದ 105 ಕರಡು ಮಾದರಿ ಮಸೂದೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್ ಕೆ ಪಾಟೀಲ್ ಅವರು ಕಾನೂನು ರಚನೆಯ ಕುರಿತಾದ ಸಂಪುಟಗಳ ಪ್ರಕಟಣೆಗೆ ಇಂಬು ನೀಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಶ್ವಾಸನೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಜನತೆಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ಹೇಳಿದರು.
ಎಚ್ ಕೆ ಪಾಟೀಲ್ ಅವರ ಮುಂದಾಳತ್ವದಲ್ಲಿ ಸುಮಾರು ನೂರು ಕಾನೂನುಗಳನ್ನು ಮಾಡಿ ಅದಕ್ಕೆ ಪರಿಣತರಿಂದ, ವಿದ್ವಾಂಸರುಗಳಿಂದ ಅಭಿಮತವನ್ನು ಪಡೆಯಲಾಗಿದೆ. ಇದೊಂದು ಪ್ರಶಂಸನೀಯ ಕಾರ್ಯ. ನಾವು ರೂಪಿಸುವ ಕಾನೂನುಗಳು ಜನಪರವಾಗಿದ್ದು, ಸಮಾಜ ಮುಖಿಯಾಗಿರಬೇಕು ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾನೂನುಗಳಿರಬೇಕು. ಜೊತೆಗೆ ಕಾನೂನುಗಳು ಸಮರ್ಪಕವಾಗಿ ಜಾರಿ ಆಗುತ್ತಿವೆಯೋ ಇಲ್ಲವೋ ಗಮನಿಸಿಕೊಳ್ಳಬೇಕಾಗಿರುವುದೂ ಕೂಡಾ ಅಷ್ಟೇ ಮುಖ್ಯ ಎಂದರು.
ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಲು, ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಲು ಮೌಢ್ಯಗಳ ಪ್ರತಿಬಂಧಕಾಜ್ಞೆಯನ್ನು ಕುರಿತು ಕಾನೂನು ಮಾಡಿದ್ದೆವು. ಆದರೆ ಆ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿ ಆಗದೇ ಹೋದದ್ದು ವಿಷಾದನೀಯ ಎಂದು ತಿಳಿಸಿದರು.
ವಿದ್ಯಾವಂತರೂ ಕೂಡಾ ಕೆಲವೊಮ್ಮೆ ಮೌಢ್ಯಗಳ ಆಚರಣೆಯಲ್ಲಿ ತೊಡಗುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಹೋಗಬೇಕು ಎಲ್ಲರೂ ಮುಖ್ಯವಾಹಿನಿಗೆ ಬರಬೇಕು ಸಮ ಸಮಾಜ ನಿರ್ಮಾಣ ಆಗಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಪರಧರ್ಮ ಸಹಿಷ್ಣುತೆ, ಸಹಬಾಳ್ವೆ ಸಂವಿಧಾನದ ಮೂಲತತ್ವ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಹೇಳಿದ್ದರೂ ಕೆಲವರು ಇದರ ವಿರುದ್ಧವಾಗಿಯೇ ನಡೆದುಕೊಳ್ಳುತ್ತಾರೆ. ಹೀಗಿರುವಾಗ ಕಾನೂನು ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ವಿದ್ಯಾವಂತರೂ, ಡಾಕ್ಟರೇಟ್ ಪದವಿ ಪಡೆದವರೂ ಹೀಗೆ ವರ್ತಿಸಿದರೆ ಆಗುವ ಪ್ರಯೋಜನವಾದರೂ ಏನು? ಇದನ್ನೆಲ್ಲ ಮೀರಿ ಬೆಳೆದರೆ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಕಾನೂನುಗಳ ಸಂರಕ್ಷಣೆಯೂ ಆಗುತ್ತದೆ. ಜಾತಿ ವ್ಯವಸ್ಥೆ ನಿರ್ಮೂಲನೆ ಯಾಗಬೇಕು ಎಂದು ಹನ್ನೆರಡನೇ ಶತಮಾನದಲ್ಲಿಯೇ ಬಸವಾದಿ ಶರಣರು ಹೇಳಿದ್ದರೂ ಇಲ್ಲಿಯವರೆಗೆ ಹಾಗೇ ಮುಂದುವರೆದುಕೊಂಡು ಬಂದಿದೆ. ಜಾತಿ ವ್ಯವಸ್ಥೆ ವಿದ್ಯಾವಂತರಲ್ಲೇ ಹೆಚ್ಚು ಎಂಬುದು ಇನ್ನೂ ಬೇಸರದ ಸಂಗತಿ.ಇವನ್ನೆಲ್ಲ ನೋಡಿದಾಗ ಕಾನೂನುಗಳ ಸಫಲತೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ನೂರು ಕಾನೂನುಗಳನ್ನು ಮಾಡಿದ್ದೇವೆ. ಕಳೆದ ಅಧಿವೇಶನದಲ್ಲಿ 39 ಕಾನೂನುಗಳನ್ನು ರೂಪಿಸಲಾಯಿತು. ಅವನ್ನೆಲ್ಲ ರಚಿಸಿದ್ದು ಸಮಸ್ಯೆಗಳ ಪರಿಹಾರಕ್ಕೆ, ಆದರೆ ಸಮಸ್ಯೆಗಳೇ ಪರಿಹಾರ ಆಗದಿದ್ದರೆ ಕಾನೂನುಗಳನ್ನು ಏಕೆ ರಚಿಸಬೇಕು ? ಇದೊಂದು ಗಂಭೀರವಾಗಿ ಯೋಚಿಸಬೇಕಿರುವ ವಿಷಯ. ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರು ಕಾನೂನು ಗೌರವಿಸಿ , ಪರಿಪಾಲನೆ ಮಾಡಬೇಕು . ಇಲ್ಲದೇ ಹೋದರೆ ಅವು ನಿಷ್ಪ್ರಯೋಜಕ ವಾಗುತ್ತದೆ ಎಂದರು.
ವರ್ಷದಲ್ಲಿ ಕನಿಷ್ಠ 60ದಿನ ಅಧಿವೇಶನ ನಡೆಸಬೇಕು ಎಂದು ಕಾನೂನು ಮಾಡಿಕೊಂಡಿದ್ದೇವೆ. ಆದರೆ ಅದರ ಪರಿಪಾಲನೆ ಆಗುತ್ತಿದೆಯೇ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಜನರಲ್ಲಿ ಜಾಗೃತಿ ಮೂಡದ ಹೊರತು ಕಾನೂನುಗಳು ಸಫಲವಾಗುವುದಿಲ್ಲ. ಜನರಲ್ಲಿ ಜಾಗೃತಿ ಮೂಡದ ಹೊರತು ಕಾನೂನುಗಳು ಸಫಲವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.ಮನುಷ್ಯರಾಗಿ ಬಾಳುವ ವ್ಯವಸ್ಥೆ ನಿರ್ಮಾಣವಾಗಬೇಕಾದರೆ ಕನೂನುಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಎಂದರು. ಅಭಿಮತ ವ್ಯಕ್ತಪಡಿಸಿರುವ ಎಲ್ಲಾ ವಿದ್ವಾಂಸರಿಗೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

 


