Thursday, October 30, 2025
Menu

ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವ ಖಟ್ಟರ್ ಮೆಚ್ಚುಗೆ: ಡಿಸಿಎಂ 

“ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, ‘ಬಿ’ ಖಾತೆಯಿಂದ ‘ಎ’ ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ರಾಜ್ಯದ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ. ಯಾವುದೇ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿಲ್ಲ” ಎಂದು ಡಿಸಿಎಂ ಡಿಕೆಶಿವಕುಮಾರ್  ಹೇಳಿದರು.

ಬೆಂಗಳೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ  ದಕ್ಷಿಣ ಭಾರತ ರಾಜ್ಯಗಳ ನಗರಾಭಿವೃದ್ಧಿ ಸಚಿವರ ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಭೆಯಲ್ಲಿ ಯಾವ ಅಂಶಗಳನ್ನು ಚರ್ಚೆ ಮಾಡಲಾಯಿತು ಎಂದು ಕೇಳಿದಾಗ,‌ “ಬೆಂಗಳೂರಿಗೆ ತನ್ನದೇ ಆದ ಮಹತ್ವವಿದೆ, ಇದು ಗ್ಲೋಬಲ್ ಸಿಟಿ ಎಂದು ಪ್ರಧಾನಿಯವರ ಮಾತನ್ನೇ ಕೇಂದ್ರ ಸಚಿವರು ಪುನರುಚ್ಛರಿಸಿದ್ದಾರೆ.‌ ಈ ಹಿಂದೆ ನಗರ ಪ್ರದೇಶಗಳಿಗೆ ಎಂದು ನಿರ್ದಿಷ್ಟವಾಗಿ ಕೇಂದ್ರದಿಂದ ಹಲವಾರು ಯೋಜನೆಗಳಿದ್ದವು. ಈಗ ಅವುಗಳನ್ನು ನಿಲ್ಲಿಸಲಾಗಿದೆ. ಈ ಬಗ್ಗೆಯೂ ಕೇಂದ್ರ ಸಚಿವರ ಗಮನ ಸೆಳೆದಿದ್ದೇವೆ. 15 ನೇ ಹಣಕಾಸು ಯೋಜನೆ ಅನ್ವಯ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. 16 ನೇ ಹಣಕಾಸು ಯೋಜನೆ ಅನ್ವಯ ಅನುದಾನಕ್ಕಾಗಿ ಬೇಡಿಕೆ ಮುಂದಿಟಿದ್ದೇವೆ” ಎಂದರು.

“ರಾಜ್ಯದಲ್ಲಿನ ನಗರೀಕರಣ ಪ್ರಕ್ರಿಯೆ ಸುಧಾರಣೆಗಳು, ಸ್ಥಳೀಯ ಸಂಸ್ಥೆಗಳ ಆಡಳಿತ, ಜಿಬಿಎ ರಚನೆ ಮತ್ತಿತರ ವಿಚಾರಗಳ ಬಗ್ಗೆ ತಿಳಿಸಲಾಯಿತು. ಕೇವಲ ಬೆಂಗಳೂರು ವಿಚಾರ ಮಾತ್ರವಲ್ಲ. ರಾಜ್ಯದ ಎಲ್ಲಾ ನಗರ, ಪಟ್ಟಣ, ಪಾಲಿಕೆಗಳ ಅಭಿವೃದ್ಧಿ ವಿಚಾರವಾಗಿಯೂ ತಿಳಿಸಿದ್ದೇವೆ” ಎಂದು ಹೇಳಿದರು.

“ಸಚಿವರಾದ ಬೈರತಿ ಸುರೇಶ್ ಹಾಗೂ ರಹೀಂಖಾನ್ ಅವರು ನಗರ, ಪಟ್ಟಣ ಭಾಗಗಳಲ್ಲಿ ಏನೇನಾಗಬೇಕು, ಯಾವ ರೀತಿಯ ಬದಲಾವಣೆಗಳನ್ನು ತರಬೇಕು ಎಂದು ತಿಳಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ನಗರೀಕರಣ ಪ್ರಕ್ರಿಯೆ ಉತ್ತಮವಾಗಿದೆ. ನಾವು ನಮ್ಮ ಪ್ರಕ್ರಿಯೆಗಳನ್ನು ಅವರಿಗೆ ವಿವರಿಸಿದ್ದೇವೆ” ಎಂದು  ತಿಳಿಸಿದರು.

“ಕರ್ನಾಟಕ ಸರ್ಕಾರದ ಒತ್ತಾಯದ ಮೇರೆಗೆ ನಮ್ಮ ರಾಜ್ಯದಲ್ಲಿ ಈ ಸಭೆ ನಡೆಯಿತು. ನಮ್ಮ ರಾಜ್ಯ‌‌ ಸೇರಿದಂತೆ ದಕ್ಷಿಣ ಭಾಗದ ತಮಿಳುನಾಡು, ಕೇರಳ, ಲಕ್ಷ‌ದ್ವೀಪ, ಪುದುಚೇರಿ ಒಟ್ಟು ಐದು ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಪ್ರತಿ ರಾಜ್ಯಗಳ ಜೊತೆಯೂ ಸಚಿವರು ಪ್ರತ್ಯೇಕ ಸಭೆ ನಡೆಸಿದರು” ಎಂದರು.

Related Posts

Leave a Reply

Your email address will not be published. Required fields are marked *