Thursday, October 30, 2025
Menu

ಬೆಂಗಳೂರಿನಲ್ಲಿ ಅಧಿಕಾರಿಗಳೂ ಸೇರಿ ಹೆಣದಲ್ಲಿ ಹಣ ಮಾಡುವ ವ್ಯವಸ್ಥೆ: ಲಿಂಕ್ಡ್​​ಇನ್ ಪೋಸ್ಟ್ ವೈರಲ್‌

ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್​ಒ ಶಿವಕುಮಾರ್ ಅವರ ಮಗಳು ಇತ್ತೀಚೆಗೆ ಮೃತಪಟ್ಟಿದ್ದ ಸಂದರ್ಭದಲ್ಲಿ ಅವರು ಎದುರಿಸಿದ ಲಂಚದ ಪ್ರಪಂಚವನ್ನು ತೆರೆದಿಟ್ಟು ಲಿಂಕ್ಡ್​​ಇನ್ ಪೋಸ್ಟ್ ಮಾಡಿದ್ದಾರೆ, ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಗಿದ್ದು, ಲಂಚ ಪಡೆದ ಆರೋಪದಲ್ಲಿ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯ ಪಿಎಸ್​ಐ ಸಂತೋಷ್ ಹಾಗೂ ಕಾನ್​ಸ್ಟೇಬಲ್ ಗೋರಖ್​ನಾಥ್ ಅವರನ್ನು ಅಮಾನತು ಮಾಡಲಾಗಿದೆ.

ಮಗಳ ಮರಣದ ನಂತರ ಬೆಂಗಳೂರಿನಲ್ಲಿ ತಾವು ಎದುರಿಸಿದ ಕಿರುಕುಳ ಮತ್ತು ಲಂಚಕ್ಕೆ ಸಂಬಂಧಿಸಿದ ಅಸಹನೀಯ ಅನುಭವವನ್ನು ಶಿವಕುಮಾರ್ ಪೋಸ್ಟ್ ಮಾಡಿದ್ದ ಆಧಾರದಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಅವರು ಪೋಸ್ಟ್‌ನಲ್ಲಿ ಹೇಳಿದ್ದು: ಐಐಎಂ ಅಹಮದಾಬಾದ್‌ನಿಂದ ಬಿಟೆಕ್ ಕಾಂಪ್ ಸೈನ್ಸ್ ಮತ್ತು ಎಂಬಿಎ ಪದವಿ ಪಡೆದಿದ್ದ ನನ್ನ ಮಗಳು ಅಕ್ಷಯ ಶಿವಕುಮಾರ್ (34 ವರ್ಷ) 2025 ರ ಸೆಪ್ಟೆಂಬರ್ 18 ರಂದು ನಮ್ಮ ಕಣ್ಣೆದುರೇ ಮೃತಪಟ್ಟಳು, ಬಳಿಕ ಆಂಬ್ಯುಲೆನ್ಸ್ ಚಾಲಕ, ಪೊಲೀಸರು, ಸ್ಮಶಾನ ಹಾಗೂ ಜಿಬಿಎ (ಹಿಂದಿನ ಬಿಬಿಎಂಪಿ) ಅಧಿಕಾರಿಗಳಿಂದ ನಾನು ನೋವು ಅನುಭವಿಸಿದ್ದೇನೆ.

ಕಸವನಹಳ್ಳಿಯ ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್‌ಗೆ ಪಾರ್ಥಿವ ಶರೀರವನ್ನು ಒಯ್ಯಲು 3000 ರೂ. ಪಾವತಿಸಿ ಎಂದು ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿದರು. ಪೊಲೀಸರು ದಾರ್ಷ್ಟ್ಯದಿಂದ ವರ್ತಿಸಿದರು. ನಾವು ಪೋಸ್ಟ್ ಮಾರ್ಟಂಗಾಗಿ ದೇಹವನ್ನು ಕೊಂಡೊಯ್ಯಬಹುದು ಎಂದು ಪೊಲೀಸ್ ಸಿಬ್ಬಂದಿ ಹೇಳಿದಾಗ ಇನ್ಸ್‌ಪೆಕ್ಟರ್ ದರ್ಪ ತೋರಿದರು. ನನ್ನ ಮಾಜಿ ಉದ್ಯೋಗದಾತರು ಮಧ್ಯ ಪ್ರವೇಶಿಸಿದ ನಂತರ ಸುಮ್ಮನಾದರು. ಮರಣೋತ್ತರ ಪರೀಕ್ಷೆ ಮುಗಿದು ಅವಳ ಕಣ್ಣುಗಳನ್ನು ದಾನ ಮಾಡಿದೆವು ಮತ್ತು ದೇಹವನ್ನು ದಹನಕ್ಕಾಗಿ ಬಿಡುಗಡೆ ಮಾಡಲಾಯಿತು.

ಸ್ಮಶಾನದಲ್ಲಿ ಅವರು ಹಣ ಕೇಳಿದರು, ಅದನ್ನು ಪಾವತಿಸಿದೆವು. ನಂತರ ಎಫ್‌ಐಆರ್ ಮತ್ತು ಪೋಸ್ಟ್ ಮಾರ್ಟಮ್ ವರದಿಯ ಪ್ರತಿಗಾಗಿ 4 ದಿನಗಳ ನಂತರ ಪೊಲೀಸರನ್ನು ಭೇಟಿಯಾದೆವು. ಆಗ ಅವರು ಹಣ ಕೇಳಿದರು. ಪೊಲೀಸ್ ಠಾಣೆಯಲ್ಲೇ ಹಣ ತೆಗೆದುಕೊಂಡರು. ಅವರು ಲಂಚ ಪಡೆದ ಜಾಗದಲ್ಲಿ ಸಿಸಿಟಿವಿ ಇರಲಿಲ್ಲ. ಸಬ್ ಇನ್ಸ್‌ಪೆಕ್ಟರ್ ತುಂಬಾ ಚೆನ್ನಾಗಿ ಮಾತನಾಡಿದರು ಮತ್ತು ಮೇಲಿನ ದಾಖಲೆಗಳಿಗೆ ಸಹಿ ಹಾಕಿದರು. ಲಂಚ ನೀಡಲು ಅವರ ಸಹಾಯಕರನ್ನು ಭೇಟಿಯಾಗಲು ಹೇಳಿದರು.
ಮರಣ ಪ್ರಮಾಣಪತ್ರಕ್ಕಾಗಿ ಜಿಬಿಎ ಕಚೇರಿಗೆ ಸತತ 5 ದಿನ ಕಾಲ ಅಲೆದಿದ್ದೆ. ಜಾತಿ ಗಣತಿಯ ಕಾರಣ ಕಚೇರಿಯಲ್ಲಿ ಸಿಬ್ಬಂದಿ ಇಲ್ಲ ಎಂದು ಹೇಳಿಕಳುಹಿಸಿದರು. ಜಿಬಿಎ ಉನ್ನತ ಅಧಿಕಾರಿಯನ್ನು ಸಂಪರ್ಕಿಸಿದೆ. ಹೆಚ್ಚಿನ ಹಣವನ್ನು ಪಡೆದ ನಂತರ ಮರಣ ಪ್ರಮಾಣಪತ್ರ ನೀಡಿದರು. ವ್ಯವಸ್ಥೆ ಈ ರೀತಿ ಆದರೆ ಸಾಮಾನ್ಯ ಜನರು ಏನು ಮಾಡಬಹುದು ಎಂಬ ಬಗ್ಗೆ ಅಚ್ಚರಿಯಾಗಿದೆ.

Related Posts

Leave a Reply

Your email address will not be published. Required fields are marked *