Thursday, October 30, 2025
Menu

ತೇಜಸ್ವಿ ಸೂರ್ಯ ಏಕೆ ಕಾರಲ್ಲಿ ಓಡಾಟ, ಮನೆಯವರನ್ನೆಲ್ಲ ಕರೆದುಕೊಂಡು ಬಸ್ಸಲ್ಲಿ  ಓಡಾಡಲಿ: ಡಿಕೆ ಶಿವಕುಮಾರ್‌

ಸಂಸದ ತೇಜಸ್ವಿ ಸೂರ್ಯ  ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೋ, ಸರ್ಕಾರಿ ಬಸ್ ಬಳಸಲಿ. ಅವರ ಪಕ್ಷದ ಶಾಸಕರು ಮೆಟ್ರೋ, ಆಟೋರಿಕ್ಷಾ, ಸಾರ್ವಜನಿಕ‌ ಸಾರಿಗೆಗಳಲ್ಲಿ ಓಡಾಡಲಿ. ಬೇಡ ಎಂದವರಾರು? ಇವರಿಗೆ ಕಾರುಗಳು ಏಕೆ ಬೇಕು? ಬೆಂಗಳೂರಿನಲ್ಲಿ 1.30 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದನ್ನು ಆತ ಅರ್ಥ ಮಾಡಿಕೊಳ್ಳಬೇಕು, ಅವರಿಗೆಲ್ಲ ವಾಹನ ಬಳಸಬೇಡಿ ಎಂದು ಹೇಳಲು ಆಗುತ್ತದೆಯೇ” ಎಂದು  ಡಿಸಿಎಂ ಡಿಕೆ ಶಿವಕುಮಾರ್  ವಾಗ್ದಾಳಿ ನಡೆಸಿದ್ದಾರೆ.

“ಆ ಹುಡುಗ ಇನ್ನು ಎಳಸು. ಆತನಿಗೆ ಇನ್ನು ಅನುಭವವಿಲ್ಲ. ಅವನೊಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ವದರುತ್ತಿದ್ದಾನೆ ಎಂದು  ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಪ್ರಶ್ನೆಗೆ  ಪ್ರತಿಕ್ರಿಯೆ ನೀಡಿದ ಅವರು, ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು,  ಈ ದೇಶದಲ್ಲಿ, ಪ್ರಪಂಚದಲ್ಲಿಯೇ ಟನಲ್ ರಸ್ತೆಗಳೇ ಬೇಡ ಎಂದು ಅವನು ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನ ಮಾಡಲಿ ಎಂದು ಕಿಡಿ ಕಾರಿದ್ದಾರೆ.

ಟನಲ್ ರಸ್ತೆ ಯೋಜನೆಯನ್ನು ತಂತ್ರಜ್ಞರ ಅಭಿಪ್ರಾಯ ಪಡೆದು ಮಾಡಬೇಕಿತ್ತು ಎನ್ನುವ ಹೇಳಿಕೆಯ ಬಗ್ಗೆ ಕೇಳಿದಾಗ ಉತ್ತರಿಸಿದ ಡಿಸಿಎಂ ಅವರು, “ಏನೋ ಹೋಗಲಿ ಅಂತ ಗೌರವ ಕೊಟ್ಟು ನನ್ನ ಜೊತೆ ಮಾತನಾಡಲು ಅವಕಾಶ ನೀಡಿದರೆ ಏನೇನೋ ಮಾತನಾಡುತ್ತಿದ್ದಾನೆ. ಆದರೆ ನಾನು ಆತನ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯನಿಗೆ ಪ್ರಪಂಚ ಹೇಗಿದೆ ಎಂದೇ ಗೊತ್ತಿಲ್ಲ. ನಾನು ಹುಡುಗನ ಬಳಿ ಕಾರಿಲ್ಲದಿದ್ದರೆ ಹೆಣ್ಣು ನೀಡುವುದಿಲ್ಲ ಎಂದಿದ್ದೆ. ಅದನ್ನೇ ಹಿಡಿದುಕೊಂಡು ಮಾತಾಡುತ್ತಿದ್ದಾನೆ. ” ಎಂದರು.

ಮದುವೆ ಮಾಡಿಸಲು ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎನ್ನುವ ಟೀಕೆಯ ಬಗ್ಗೆ ಕೇಳಿದಾಗ, “ಅದಕ್ಕೆ ನಾನು ಆತನನ್ನು ಎಳಸು ಎಂದು ಕರೆದಿದ್ದು. ನೀವೆಲ್ಲರೂ ಕ್ಯಾಮೆರಾ ಹಿಡಿದುಕೊಂಡು (ಮಾಧ್ಯಮದವರು) ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಿಕೊಂಡು ಕೆಲಸ ಮಾಡಲು ಆಗುತ್ತದೆಯೇ? ಶಾಲಾ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸುತ್ತಾರೆ. ಅವರಿಗೆ ಸಾರ್ವಜನಿಕ ಸಾರಿಗೆಯಲ್ಲಿ‌ ಕಳುಹಿಸಿ ಎಂದು ಹೇಳಲು ಆಗುತ್ತದೆಯೇ?” ಎಂದು ಪ್ರಶ್ನಿಸಿದರು.

“ಈ ರಾಜ್ಯಕ್ಕೆ ಮೆಟ್ರೋ ತಂದವರು ನಾವು. ಅವರಿಗೆ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ? ಕೇಂದ್ರದಿಂದ ಏನು ತೆಗೆದುಕೊಂಡು ಬಂದಿದ್ದಾರೆ? ಬೆಂಗಳೂರಲ್ಲಿ ಎಷ್ಟು ಪಿಲ್ಲರ್ ಹಾಕಿದ್ದಾರೆ? ಯೋಜನೆಗೆ ಹಣವೆಷ್ಟು ತಂದಿದ್ದಾರೆ? ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ಶೇ. 11-12 ರಷ್ಟು ಹಣ ನೀಡುತ್ತಿದೆ. ಭೂ ಪರಿಹಾರ ಸೇರಿದಂತೆ ಎಲ್ಲವನ್ನೂ ನಾವೇ ನೀಡುತ್ತಿದ್ದೇವೆ” ಎಂದು ಹೇಳಿದರು.

“ಅವನ ಬಗ್ಗೆ ನನ್ನ ಬಳಿ ಯಾವ ಪ್ರಶ್ನೆಯನ್ನೂ ಕೇಳಬೇಡಿ. ಹೋಲಿಕೆ ಮಾಡಬೇಡಿ. ಹೀ ಇಸ್ ಎ ವೇಸ್ಟ್ ಮೆಟಿರಿಯಲ್, ಖಾಲಿ ಟ್ರಂಕ್ ಆತ. ಅವರ ಪಕ್ಷದ ಹಿರಿಯ ನಾಯಕರಾದ ಅಶೋಕ್, ಅಶ್ವತ್ಥ ನಾರಾಯಣ್, ಬಸವರಾಜ ಬೊಮ್ಮಾಯಿ,‌ ಜಗದೀಶ್‌ ಶೆಟ್ಟರ್ ಅಂತಹವರು ಮಾತನಾಡಿದರೆ ಉತ್ತರ ನೀಡೋಣ. ಏಕೆಂದರೆ ‌ಅವರಿಗೆ ಇದೆಲ್ಲವೂ ಅರ್ಥವಾಗುತ್ತದೆ. ಶೆಟ್ಟರ್ ಅವರು ತಮ್ಮ ಊರಿನಲ್ಲಿ ಬಿಆರ್ ಟಿಎಸ್ ಮಾಡಲು ಪ್ರಯತ್ನ ಮಾಡಿದರೂ ಆಗಲಿಲ್ಲ. ಬೆಂಗಳೂರಿನಲ್ಲಿ ಬಿಆರ್ ಟಿಎಸ್ ಮಾಡಲು ಜಾಗವಿದೆಯೇ? ಭೂ ಪರಿಹಾರ ಎಷ್ಟಾಗುತ್ತದೆ ಎನ್ನುವ ಅರಿವು ತೇಜಸ್ವಿ ಸೂರ್ಯನಿಗೆ ತಲೆಯಲ್ಲಿಯೇ ಇಲ್ಲ” ಎಂದರು.

Related Posts

Leave a Reply

Your email address will not be published. Required fields are marked *