ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿರುವ ರಾಯಣ್ಣ ಸೈನಿಕ ಶಾಲೆಯನ್ನು ದೇಶದಲ್ಲಿಯೇ ಮಾದರಿ ಸೈನಿಕ ಶಾಲೆಯನ್ನಾಗಿ ರೂಪಿಸಬೇಕು. ನಿರ್ಮಾಣ ಕಾಮಗಾರಿ ಗುಣಮಟ್ಟದ ಪರಿಶೀಲನೆ ನಡೆಸಿದ ಬಳಿಕ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಸೈನಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಬೇಕು. ಕ್ರೀಡಾ ಚಟುಟಿಕೆಗಳು ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ 5 ನೇ ಸಭೆಯಲ್ಲಿ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ (ವೀರಭೂಮಿ) ನಿರ್ಮಾಣ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗನೆ ಅದನ್ನು ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಬೇಕು. • ಸಂಗೊಳ್ಳಿ ರಾಯಣ್ಣನೊಂದಿಗೆ ಇತರ 7ಮಂದಿಯನ್ನು ಬ್ರಿಟಿಷರು ನೇಣಿಗೇರಿಸಿದ್ದು, ಈ ಮಾಹಿತಿಯನ್ನು ಸಹ ದಾಖಲಿಸಬೇಕು ಎಂದು ಹೇಳಿದರು.
2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರೂ.28 ಕೋಟಿ ಮೊತ್ತದ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.


