ಬೆಂಗಳೂರಿನ ಜೆಪಿ ನಗರದಲ್ಲಿ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿರುವ ಯುವತಿಯು ಮಗಳಂತೆ ಸಾಕಿದ ದತ್ತು ತಾಯಿಯ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಕಳವು ಮಾಡಿರುವ ಪ್ರಕರಣ ನಡೆದಿದೆ. 15 ವರ್ಷಗಳಿಂದ ಮನೆ ಮಾಲೀಕರ ಮಗಳಾಗಿ ಬೆಳೆದ ಯುವತಿ ಮಂಗಳ ಆನ್‌ಲೈನ್ ಬೆಟ್ಟಿಂಗ್ ಚಟದ ದಾಸಿಯಾಗಿ ಮನೆ ಕಳವುಗೈದು ಪೊಲೀಸರ ಅತಿಥಿಯಾಗಿದ್ದಾಳೆ.
ಮನೆಮಾಲೀಕಿ ಆಶಾ ಜಾಧವ್ (58) ಅವರಿಗೆ ಮಕ್ಕಳಿರಲಿಲ್ಲ. ಪತಿ ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಅವರು 15 ವರ್ಷಗಳ ಹಿಂದೆ ಮನೆಗೆಲಸದಾಕೆಯಾಗಿ ಮಂಗಳಳನ್ನು ನೇಮಿಸಿಕೊಂಡರು. ಕರಮೇಣ ಆಕೆಯನ್ನು ಮಗಳಂತೆ ಪರಿಗಣಿಸಿ ತಮ್ಮ 5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಮಂಗಳ ಹೆಸರಿಗೆ ವಿಲ್ ಮಾಡಿದ್ದರು. ಮಂಗಳ 40 ಲಕ್ಷ ರೂಪಾಯಿ ಸಾಲದಲ್ಲಿ ಸಿಲುಕಿದಾಗ ಆಶಾ ಆ ಸಾಲವನ್ನು ತೀರಿಸಿದ್ದರು.
ಆದರೆ ಮಂಗಳಳ ಆನ್‌ಲೈನ್ ಬೆಟ್ಟಿಂಗ್ ಚಟವು ಮುಂದುವರಿದು ಮನೆಯಲ್ಲಿದ್ದ 450 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿ ಬಂಗಾರ ಕದಿಯುವವರೆಗೆ ತಲುಪಿತ್ತು. ಚಿನ್ನವನ್ನು ಕಳವುಗೈದ ಆಕೆ ಬೀರು ಕೀಯನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು, ದೀಪಾವಳಿ ಸಮಯದಲ್ಲಿ ಚಿನ್ನ ತೆಗೆಯಲು ಬೀರು ತೆರೆದಾಗ ಕಳವಾಗಿರುವುದು ಪತ್ತೆಯಾಗಿದೆ.
ಯಾರೋ ಮಾಡಿರಬಹುದೆಂದು ಆಶಾ ದೂರು ನೀಡಿದರು. ಪೊಲೀಸರು ಮಂಗಳಳ ಮೇಲೆ ಅನುಮಾನಿಸಿದಾಗ ಆಶಾ ನಿರಾಕರಿಸಿದರು. ಪೊಲೀಸರು ಮಂಗಳಳ ಸಿಡಿಆರ್ ಪರಿಶೀಲನೆ ನಡೆಸಿದಾಗ ಅವಳು ಚಿನ್ನವನ್ನು ಅಡಮಾನ ಇಟ್ಟಿದ್ದ ಗೊತ್ತಾಗಿದೆ. ವಿಚಾರಣೆಯಲ್ಲಿ ಮಂಗಳ ತಪ್ಪನ್ನು ಒಪ್ಪಿಕೊಂಡಳು. ಆಶಾ ಮಂಗಳಳನ್ನು ಬಿಡಿಸಿಕೊಳ್ಳಲು ಯತ್ನಿಸಿದರೂ ಪೊಲೀಸರು ಬಂಧಿಸಿದರು. ಕಳವು ಮಾಡಿದ 450 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ನಂತರ ಆಶಾ ಜಾಧವ್ ಅವರು ಮಂಗಳ ಹೆಸರಿಗೆ ಮಾಡಿದ್ದ ಮನೆಯ ವಿಲ್ ವಾಪಸ್ ಪಡೆದುಕೊಂಡಿದ್ದಾರೆ. ಪ್ರತಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದ ಮತ್ತು ವಿದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದ ಆಶಾ ಅವರು, ಮಂಗಳಳ ಮದುವೆಯ ಏರ್ಪಾಡು ಮಾಡುತ್ತಿದ್ದರು.


