18 ಕೋಟಿ 30 ಲಕ್ಷ ಜಿಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಸೈಬರ್ ಕ್ರಿಮಿನಲ್‌ಗಳು ಕಳವು ಮಾಡಿದ್ದಾರೆ. ಜಿಮೇಲ್ ಬಳಕೆದಾರರ ವೈಯಕ್ತಿಕ ಮಾಹಿತಿಗಳು, ಫೋಟೋಗಳು, ವೀಡಿಯೊಗಳು, ಬ್ಯಾಂಕ್ ವಿವರಗಳು ಮತ್ತು ಇತರ ಖಾಸಗಿ ಡೇಟಾ ಅಪಾಯದಲ್ಲಿದೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜಿಮೇಲ್ ಬಳಕೆದಾರರು ಖಾತೆಯ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸುವಂತೆಯೂ ತಜ್ಞರು ಸೂಚಿಸಿದ್ದಾರೆ.
ಬಳಕೆದಾರರ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಖಾತೆಯನ್ನು ಹ್ಯಾಕ್ ಮಾಡಿದರೆ ಕಳ್ಳರು ಬಳಕೆದಾರರ ಇಮೇಲ್, ಬ್ಯಾಂಕ್ ವಿವರಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಜಿಮೇಲ್ ಖಾತೆಯ ಪಾಸ್‌ವರ್ಡ್‌ನ್ನು ತಕ್ಷಣ ಬದಲಾಯಿಸಿ. ಬಲವಾದ ಪಾಸ್‌ವರ್ಡ್ ರಚಿಸಲು ಅಕ್ಷರಗಳು, ಸಂಖ್ಯೆಗಳು, ಮತ್ತು ವಿಶೇಷ ಚಿಹ್ನೆಗಳ ಸಂಯೋಜನೆ ಬಳಸಿ. ಕನಿಷ್ಠ 12-16 ಅಕ್ಷರಗಳ ಪಾಸ್‌ವರ್ಡ್ ಸೆಟ್ ಮಾಡಿ ಎಂದು ಸೂಚಿಸಲಾಗಿದೆ.
ಜಿಮೇಲ್‌ನಲ್ಲಿ ಟು-ಫ್ಯಾಕ್ಟರ್ ಆಥೆಂಟಿಕೇಶನ್ ಸಕ್ರಿಯಗೊಳಿಸಿ. ಇದರಿಂದ ಪಾಸ್‌ವರ್ಡ್ ಜೊತೆಗೆ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅಥವಾ ಇತರ ಭದ್ರತಾ ಕ್ರಮಗಳನ್ನು ಬಳಸಿಕೊಂಡು ಖಾತೆಯನ್ನು ರಕ್ಷಿಸಬಹುದು. ಜಿಮೇಲ್‌ನ “ಸೆಕ್ಯುರಿಟಿ” ವಿಭಾಗದಲ್ಲಿ ಖಾತೆಯ ಚಟುವಟಿಕೆಯನ್ನು ಪರಿಶೀಲಿಸಿ. ಅನಧಿಕೃತ ಲಾಗಿನ್‌ಗಳು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಿ. ಡಿವೈಸ್‌ನಲ್ಲಿ ಆಂಟಿವೈರಸ್ ತಂತ್ರಾಂಶವನ್ನು ಬಳಸಿ, ಮಾಲ್‌ವೇರ್‌ಗಾಗಿ ಸ್ಕ್ಯಾನ್ ಮಾಡಿ. ಇದರಿಂದ ಕದ್ದ ಮಾಹಿತಿಯನ್ನು ತಡೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಜಿಮೇಲ್ ಖಾತೆಯಿಂದ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳು ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪರಿಶೀಲಿಸಿ. ಅನುಮಾನಾಸ್ಪದ ವಹಿವಾಟು ಕಂಡುಬಂದರೆ ಬ್ಯಾಂಕ್‌ಗೆ ತಿಳಿಸಿ. ಒಂದೇ ಪಾಸ್‌ವರ್ಡ್‌ನ್ನು ಬೇರೆ ಬೇರೆ ಖಾತೆಗಳಿಗೆ ಬಳಸುವ ಬಳಕೆದಾರರು ಎಲ್ಲ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಬೇಕು ಎಂದು ತಿಳಿಸಿದ್ದಾರೆ.


