ಗಾಜಾ ಮತ್ತು ಇಸ್ರೇಲ್ ಪರಸ್ಪರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಇಸ್ರೇಲ್ ಗಾಜಾ ಪಟ್ಟಿ ಪ್ರದೇಶದ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿದೆ. ಕದನ ವಿರಾಮದ ನಡುವೆಯೂ ಇಸ್ರೇಲ್ ಗಾಜಾದಲ್ಲಿ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 30 ಮಂದಿ ಪ್ರಾಣ ಕಳೆದುಕೊಂಡಿದ್ದಾರೆಂದು ಗಾಜಾದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ. ಹಮಾಸ್‌ನಿಂದ ಇಸ್ರೇಲ್ ಸೈನಿಕರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಬಲ ದಾಳಿ ನಡೆಸಲು ಆದೇಶಿಸಿದ್ದಾರೆ.
ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಮೂರು ವೈಮಾನಿಕ ದಾಳಿಗಳು ನಡೆದಿವೆ, ಗಾಜಾದ ಪ್ರಮುಖ ಆಸ್ಪತ್ರೆಯಾದ ಅಲ್-ಶಿಫಾದ ಬಳಿಯೂ ದಾಳಿ ನಡೆದಿದೆ. ಕೆಲವು ಚಕಮಕಿಗಳಿದ್ದರೂ ಶಾಂತಿ ಒಪ್ಪಂದ ಉಳಿದಿದೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ. ಹಮಾಸ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು “ರಫಾದಲ್ಲಿ ನಡೆದ ಗುಂಡಿನ ದಾಳಿ ಘಟನೆಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದೆ. ಗಾಜಾ ಕದನ ವಿರಾಮಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಇಸ್ರೇಲ್ ಸರ್ಕಾರದ ಪ್ರಕಾರ, ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿ, ಗಾಝಾದೊಳಗೆ ಉಳಿದಿರುವ 13 ಬಂಧಿತರ ಶವಗಳನ್ನು ಹಸ್ತಾಂತರಿಸದಿರುವುದು ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ. ಇಸ್ರೇಲ್ ಕೆಲವು ಯಂತ್ರೋಪಕರಣಗಳನ್ನು ಬಳಸಲು ಅನುಮತಿಸಿದರೂ ಎಲ್ಲ ಶವಗಳೂ ಹೊರತೆಗೆದಿಲ್ಲ ಎಂದು ತಿಳಿದು ಬಂದಿದೆ. ಹಮಾಸ್ ತನ್ನ ಶೋಧ ಕಾರ್ಯಕ್ಕೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದೆ. ಭಾರಿ ಯಂತ್ರೋಪಕರಣ ಮತ್ತು ರೆಡ್ ಕ್ರಾಸ್ ಸಿಬ್ಬಂದಿಗೆ ಗಾಝಾದ ಪ್ರಮುಖ ಪ್ರದೇಶಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಹಮಾಸ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದ್ದು, ಕದನ ವಿರಾಮ ಜಾರಿಗೆ ಬಂದ ಬಳಿಕ ಇಸ್ರೇಲ್ 125 ಬಾರಿ ಉಲ್ಲಂಘನೆ ಮಾಡಿದ್ದು, 94 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.


