Menu

ದೇಶದಲ್ಲೇ ಮೊದಲು ಶುಶ್ರೂಷಕರ ನೋಂದಣಿಗೆ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ ಲೋಕಾರ್ಪಣೆ ಇಂದು

ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೊಂದಣಿಗಾಗಿ, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ ಅಭಿವೃದ್ಧಿಪಡಿಸಿರುವ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ ಜಾರಿಗೆ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ತಿಳಿಸಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವರು, ಆಧಾರ್‌, ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನದ ಲೋಕಾರ್ಪಣೆ ಜುಲೈ 15  (ಇಂದು)  ನಡೆಯಲಿದೆ ಎಂದರು.

ಯುಐಡಿಎಐ (UIDAI), ಸಿ-ಇಜಿ (C-eG), ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಆಧಾರ್‌ ಇ-ಕೆವೈಸಿ (E-Kyc)ಯಿಂದ ಶುಶ್ರೂಷಕರ ವೈಯಕ್ತಿಕ ಡಾಟಾ, ವಿಳಾಸ, ಫೋಟೋ, ಹಾಗೂ ಇತರೆ ಮಾಹಿತಿಗಳನ್ನು ಆಧಾರ್‌ ಸರ್ವರ್‌ ನಿಂದ ನೇರವಾಗಿ ಕರ್ನಾಟಕ ಶುಶ್ರೂಷ ಪರಿಷತ್‌ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೋಂದಣಿಗಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿನ ಬೆಂಗಳೂರಿನ ಕೇಂದ್ರ ಕಚೇರಿಗೆ ಬರಬೇಕಾಗಿತ್ತು ಎಂದರು.

ತೊಂದರೆ ತಪ್ಪಿಸಲು ನೂತನ ತಂತ್ರಜ್ಞಾನ
ರಾಜ್ಯ ಮತ್ತು ಹೊರ ರಾಜ್ಯದ ಶುಶ್ರೂಷ ಸಮೂಹ ಕೇವಲ ನೋಂದಣಿಯ ಉದ್ದೇಶದಿಂದ ಊಟ, ವಸತಿಗಾಗಿ ಸಾವಿರಾರು ರೂಪಾಯಿ ವ್ಯಯಿಸಿ ಪರದಾಡುವ ಪರಿಸ್ಥಿತಿ ಇತ್ತು. ಜೊತೆಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನೋಂದಣಿಗಾಗಿ ಸರತಿಯಲ್ಲಿ ನಿಂತು ಕಾಯಬೇಕಾಗಿತ್ತು. ಮಹಿಳೆಯರು, ಗರ್ಭಿಣಿಯರು, ಹಸುಗೂಸುಗಳ ತಾಯಂದಿರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು. ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಿದಂತಾಗಿದೆ ಎಂದು ಡಾ. ಪಾಟೀಲ್‌ ತಿಳಿಸಿದರು.

ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿಗೆ ನೋಂದಣಿ ಉದ್ದೇಶದಿಂದ ನಾಡಿನ ನಾನಾ ಮೂಲೆಗಳಿಂದ ಮತ್ತು ವಿವಿಧ ಹೊರರಾಜ್ಯಗಳಿಂದ ಬರುತ್ತಿದ್ದ ಶುಶ್ರೂಷಕರ ತೊಂದರೆಗಳನ್ನು ತಪ್ಪಿಸಲು ದೇಶದಲ್ಲೇ ಪ್ರಥಮ ಬಾರಿಗೆ ಆಧಾರ್‌ ಮತ್ತು ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ಅವಕಾಶ ಮಾಡಿಕೊಡಲಾಗುತ್ತಿದೆ. ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಹಾಗೂ ಕೃತಕ ಬುದ್ದಿಮತ್ತೆಯ ನೆರವಿನಿಂದ ನಮ್ಮ ಸರ್ಕಾರ ಅಳವಡಿಸಿಕೊಂಡಿರುವ ಈ ನೂತನ ತಂತ್ರಜ್ಞಾನ ಲಕ್ಷಾಂತರ ಶುಶ್ರೂಷಕರ ತೊಂದರೆ ತಾಪತ್ರಯಗಳಿಗೆ ಅಂತ್ಯ ಹಾಡಲಿದೆ ಎಂದು ಸಚಿವರು ಹೇಳಿದರು.

ನಕಲಿ ಹಾವಳಿ ತಡೆಗಟ್ಟಲು ಸಹಕಾರಿ
ಹೊಸ ಡಿಜಿ ಲಾಕರ್‌ (Digi Locker-Requester) ತಂತ್ರಜ್ಞಾನದಿಂದ ಶುಶ್ರೂಷಕರ ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ ಮತ್ತಿತರ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಆಯಾ ಪರೀಕ್ಷಾ ಬೋರ್ಡ್‌ಗಳಿಂದ ನೇರವಾಗಿ ಪಡೆದುಕೊಳ್ಳಬಹುದು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿಗಳು ಅಳವಡಿಸಿಕೊಂಡಿರುವ ಈ ತಂತ್ರಜ್ಞಾನದಿಂದ ಪರೀಕ್ಷಾ ಫಲಿತಾಂಶವನ್ನು ನೇರವಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ ಪಡೆದುಕೊಳ್ಳಲಿದೆ. ನಂತರ ಡಿಜಿ ಲಾಕರ್‌ ತಂತ್ರಜ್ಞಾನ (Digi Locker-Issuer)ದಿಂದ ಶುಶ್ರೂಷಕರಿಗೆ ನೇರವಾಗಿ ನೋಂದಣಿ ಪತ್ರವನ್ನು ವಿತರಿಸಬಹುದಾಗಿದೆ ಎಂದು ಶುಶ್ರೂಷ ಪರಿಷತ್ತಿನ ಕುಲಸಚಿವರಾದ ಡಾ.ಕೆ.ಮಲ್ಲು ತಿಳಿಸಿದರು. ಈ ತಂತ್ರಜ್ಞಾನದ ಮತ್ತೊಂದು ಪ್ರಮುಖವಾದ ಅಂಶ ಎಂದರೆ, ನಕಲಿ ನೋಂದಣಿ ಪ್ರಮಾಣ ಪತ್ರಗಳ ಹಾವಳಿಯನ್ನೂ ತಡೆಗಟ್ಟಬಹುದಾಗಿದೆ ಎಂದು ‌ಡಾ.ಕೆ.ಮಲ್ಲು ಮಾಹಿತಿ ನೀಡಿದರು.

Related Posts

Leave a Reply

Your email address will not be published. Required fields are marked *