ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ನೀಲಮ್ಮ (39) ಮತ್ತು ಹರೀಶ್ (19) ಮೃತ ದುರ್ದೈವಿಗಳು.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ನೀಲಮ್ಮ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿಕೊಂಡು ಒದ್ದಾಡುತ್ತಿರುವಾಗ ರಕ್ಷಿಸಲು ಹೋದ ಮಗ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯುತ್ ಸರಬರಾಜು ಮಂಡಳಿಯ ನಿರ್ಲಕ್ಷ್ಯದಿಂದ ಈ ಸಾವುಗಳಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಯಿಗೆ ಬೈದನೆಂದು ಆಟೊ ಚಾಲಕನ ಹತ್ಯೆ
ಬೆಂಗಳೂರಿನ ಉಲ್ಲಾಳ ಉಪನಗರದ ರಾಮಚಂದ್ರಪ್ಪ ಲೇಔಟ್ನಲ್ಲಿ ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ಆಟೊ ಚಾಲಕನನ್ನು ಹತ್ಯೆ ಮಾಡಿದ್ದಾನೆ.
ಆಟೊ ಚಾಲಕ ಅವಿನಾಶ್ (36) ಕೊಲೆಯಾದವರು, ಕೊಲೆ ಆರೋಪಿ ಕಾರ್ತಿಕ್ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಟೀಲ್ ರಾಡ್ನಿಂದ ಕಾರ್ತಿಕ್ ಹಲ್ಲೆ ನಡೆಸಿದ್ದರಿಂದ ಅವಿನಾಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೆತ್ತವರನ್ನು ಕಳೆದುಕೊಂಡಿದ್ದ ಅವಿನಾಶ್ ಕುಡಿತದ ಚಟ ಹೊಂದಿದ್ದು, ಹೆಂಡತಿಯೂ ಆತನನ್ನು ತೊರೆದಿದ್ದಳು. ರಾಮಚಂದ್ರಪ್ಪ ಲೇಔಟ್ನಲ್ಲಿದ್ದ ಚಿಕ್ಕ ಮನೆಯಲ್ಲಿ ವಾಸವಿದ್ದ. ನೆರೆ ಮನೆಯಲ್ಲಿದ್ದ ಕಾರ್ತಿಕ್ ತಾಯಿ ಅವಿನಾಶ್ನನ್ನು ತನ್ನ ಮಗನಂತೆ ನೋಡಿಕೊಂಡಿದ್ದರು. ರಾತ್ರಿ ಕುಡಿದು ಮನೆಗೆ ಬಂದ ಅವಿನಾಶ್ ಕಾರ್ತಿಕ್ ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಕೋಪಗೊಂಡ ಆಕೆ ಮಗನಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಕೆಲಸಕ್ಕೆ ಹೋಗಿದ್ದ ಕಾರ್ತಿಕ್ ಮನೆಗೆ ಬಂದವನೇ ಅವಿನಾಶ್ ಜೊತೆ ಜಗಳ ತೆಗೆದಿದ್ದು, ಬೈಕ್‌ನ ಸ್ಟೀಲ್ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್ ಮೃತಪಟ್ಟಿದ್ದಾನೆ.
ಆರೋಪಿ ಕಾರ್ತಿಕ್, ಬೆಳಗಿನ ಜಾವ ಸರೆಂಡರ್ ಆಗಲು ತೀರ್ಮಾನಿಸಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಭೆಟಿ ನೀಡಿರುವ ಜ್ಞಾನ ಭಾರತಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


