ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಿಸುವ ಸಾರ್ವಜನಿಕರ ಹಣದ ಲೂಟಿಯ ಯೋಜನೆಯನ್ನು ಉಪ ಮುಖ್ಯಮಂತ್ರಿ, ರಾಜ್ಯ ಸರಕಾರ, ಬಿಬಿಎಂಪಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಾಡದ ರೀತಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟನೆಲ್ ರಸ್ತೆ ಯೋಜನೆಯನ್ನು ಬಿಜೆಪಿ ವಿರೋಧಿಸುತ್ತದೆ. ಸಾರ್ವಜನಿಕರ ಒಂದೊಂದು ರೂಪಾಯಿಗೆ ನ್ಯಾಯ ಸಿಗುವ ರೀತಿಯಲ್ಲಿ ನಾವು ಹೋರಾಟ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಟನೆಲ್ ರಸ್ತೆಯ ಡಿಪಿಆರ್, ಸಾಧ್ಯಾಸಾಧ್ಯತೆ ವರದಿಯಲ್ಲಿ ಸಮಸ್ಯೆ ಇದೆ. ಡಿಬಾರ್ ಆದ ಕನ್ಸಲ್ಟೆಂಟ್ ಅನ್ನು ನೇಮಿಸಿ ಇದನ್ನು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು. ಟನೆಲ್ ರಸ್ತೆಯು ಕಾಂಗ್ರೆಸ್ ಜೋಬನ್ನು ತುಂಬಿಸುವ ಯೋಜನೆ ಎಂದು ಅವರು ದೂರಿದರು. ಮಾಧ್ಯಮಗಳ ಮೂಲಕ ಇವತ್ತು ಜನಜಾಗೃತಿ ಶುರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ ಸಂಸದರು, ಶಾಸಕರು, ನಮ್ಮ ರಾಜ್ಯಾಧ್ಯಕ್ಷರು, ಬೆಂಗಳೂರಿನ ಬಿಜೆಪಿಯ ನಮ್ಮೆಲ್ಲ ನಾಯಕರು ಚರ್ಚೆ ಮಾಡಲಿದ್ದೇವೆ. ಕಾನೂನಾತ್ಮಕ ಹೋರಾಟ, ಜನಜಾಗೃತಿ ಮೊದಲಾದ ವಿಷಯಗಳ ಚಿಂತನೆ ನಡೆಸುತ್ತೇವೆ. ಇದು ಸಾರ್ವಜನಿಕರ ಹಣದ ದೊಡ್ಡ ಲೂಟಿ ಎಂದು ಆರೋಪಿಸಿದರು.
ಡಿಪಿಆರ್ನಲ್ಲಿ ಬೆಂಗಳೂರಿನ ಮೆಟ್ರೋ ಯೋಜನೆ ಎಂದಿದೆ. ಬಿಬಿಎಂಪಿಯು 9.5 ಕೋಟಿಯನ್ನು ಡಿಪಿಆರ್ಗೆ ಖರ್ಚು ಮಾಡಿದೆ. ಮೆಟ್ರೋ ಸಂಬಂಧಿಸಿದ ಯೋಜನೆಯನ್ನೇ ಕಟ್ ಆಂಡ್ ಪೇಸ್ಟ್ ಮಾಡಿ ಇದನ್ನು ತಯಾರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಈ ಭಂಡತನ ಹೇಗಿದೆ ಎಂದರೆ, ನಾಸಿಕ್, ಮಾಳೆಗಾಂವ್ ಉದಾಹರಣೆ ನೀಡಿ ಕರ್ನಾಟಕದ ಜನ ದಡ್ಡರೆಂದು ಭಾವಿಸಿದರೆ, ಈ ಥರ ಭಂಡತನದಲ್ಲಿ ಜನರ ದುಡ್ಡು ಹೊಡೆಯಬಹುದೆಂದು ನಿಂತರೆ ಅಸಹ್ಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ತಡೆಯಲು ಇಂಥ ದೊಡ್ಡ ಯೋಜನೆಯನ್ನು ಡಿಎಂಎಲ್ಟಿಎ ಕಾನೂನಿನಂತೆ ಮಾಡಲು ನಮ್ಮ ಸರಕಾರ ತಿಳಿಸಿತ್ತು. ಇವರು ಆ ಕಾನೂನು ಜಾರಿಯಲ್ಲಿದ್ದರೂ ಇವರು ಯೋಜನಾ ವರದಿ ಮಾಡಿ ಟೆಂಡರ್ ಕರೆಯಲು ಹೊರಟಿದ್ದಾರೆ ಎಂದು ಟೀಕಿಸಿದರು. ನಿಯೋ ಬಸ್ ವ್ಯವಸ್ಥೆಯನ್ನು ಇದರೊಳಗೆ ಅಳವಡಿಸುವ ಸಲಹೆ ಮಾಡಿದ್ದಾರೆ. ಹಾಗೆಂದರೆ ಏನು? ಅದು ನೆಲದ ಮೇಲೆ ಹೋಗಲಿದೆಯೇ? ಆಕಾಶದಲ್ಲಿ ಹೋಗಲಿದೆಯೇ? ಎಂದು ಅವರು ಕೇಳಿದರು. ಇದು ಯಾವ ದೇಶದಲ್ಲಿದೆ ಎಂದು ಪ್ರಶ್ನೆ ಮಾಡಿದರು.
ಡಿಪಿಆರ್ (ವಿಸ್ತತ ಯೋಜನಾ ವರದಿ) ಕೂಡ ಬಹಿರಂಗಪಡಿಸಿಲ್ಲ ಎಂದ ಅವರು, ಸಾಧ್ಯಾಸಾಧ್ಯತೆ ವರದಿಗೂ ಮೊದಲೇ ಡಿಪಿಆರ್ ಸಿದ್ಧವಾಗಿತ್ತು ಎಂದು ಟೀಕಿಸಿದರು. ಸಾಧ್ಯಾಸಾಧ್ಯತೆ ವರದಿಯಲ್ಲಿ ಡಿಪಿಆರ್ ಕನ್ಸಲ್ಟೆಂಟ್ ಯಾರಾಗಬೇಕೆಂದು ಸಲಹೆ ನೀಡಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ವಾಹನ ವ್ಯವಸ್ಥೆ ಇಲ್ಲದ ಕಾರಣ ಏರ್ಪೋರ್ಟಿಗೆ ಶೇ 72 ಜನರು ಖಾಸಗಿ ವಾಹನದಲ್ಲೇ ಹೋಗಬೇಕಿದೆ. ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸಲು ನಾವು 2020ರಲ್ಲಿ ಸಮಗ್ರ ಸಂಚಾರ ಯೋಜನೆಯನ್ನು ರೂಪಿಸಿದ್ದೆವು. ಬೆಂಗಳೂರಿಗೆ 16,580 ಬಸ್ ಬೇಕೆಂದು ಈ ಯೋಜನೆ ಹೇಳಿದೆ. ಇವತ್ತು ಆರು ಸಾವಿರ ಬಸ್ಸುಗಳಿದ್ದು, 9 ಸಾವಿರಕ್ಕೂ ಹೆಚ್ಚು ಬಸ್ ಕೊರತೆ ಇದೆ ಎಂದು ವಿಶ್ಲೇಷಿಸಿದರು. ಬಸ್ ಸಂಖ್ಯೆ ಹೆಚ್ಚಿಸಲು ರಾಜ್ಯ ಸರಕಾರ ಏನೂ ಮಾಡುತ್ತಿಲ್ಲ ಎಂದು ದೂರಿದರು. 2031ನೇ ಇಸವಿ ಒಳಗೆ ಮೆಟ್ರೊ ಜಾಲ 317 ಕಿಮೀ ಇರಬೇಕಿದೆ. ಈಗ ಕೇವಲ 78 ಕಿಮೀ ಮೆಟ್ರೊ ಜಾಲ ಇದೆ ಎಂದು ವಿವರಿಸಿದರು. 4 ವರ್ಷದಿಂದ ಸಿದ್ಧವಿರುವ ಯೆಲ್ಲೊ ಲೈನನ್ನು ಸಂಚಾರಕ್ಕೆ ತೆರೆಯುತ್ತಿಲ್ಲ ಎಂದು ಟೀಕಿಸಿದರು.
2031ನೇ ಇಸವಿ ಒಳಗೆ 148 ಕಿಮೀ ಸಬರ್ಬನ್ ರೈಲ್ವೆ ಆಗಬೇಕಿತ್ತು. ಈಗ 4 ಕಾರಿಡಾರ್ಗಳ ಯೋಜನೆ ನಿಂತಿದೆ. ಹೊಸ 100 ಕಿಮೀ ಫ್ಲೈಓವರ್ ಮಾಡುವುದಾಗಿ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. 20ಕ್ಕೂ ಹೆಚ್ಚು ಫ್ಲೈಓವರ್ಗಳು 5-6 ವರ್ಷದಿಂದ ಪೂರ್ಣಗೊಳ್ಳದೆ ನಿಂತಿವೆ. ನಿಂತಿರುವ ಈ ಫ್ಲೈಓವರ್ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು. 2.5 ಕಿಮೀ ಉದ್ದದ 120 ಕೋಟಿ ವೆಚ್ಚದ ಈಜಿಪುರ ಫ್ಲೈಓವರ್ ರೀತಿಯಲ್ಲಿ ಆ ಫ್ಲೈಓವರ್ ಕಟ್ಟಿದರೆ 800 ವರ್ಷ ಬೇಕು ಎಂದು ವ್ಯಂಗ್ಯವಾಡಿದರು. ಸುರಂಗ ಮಾರ್ಗ ಎಂದರೆ ಹಾಡಹಗಲೇ ದರೋಡೆ ಎಂದು ಟೀಕಿಸಿದರು.
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ 119 ಕಿಮೀ ಉದ್ದವಿದ್ದು, 6 ಲೇನ್ನದು. ಇದಕ್ಕೆ 8,500 ಕೋಟಿ ಖರ್ಚಾಗಿದೆ. ಜಮ್ಮುವಿನ ಹಿಮಾಲಯ ಕೊರೆದು ಮಾಡಿದ 9 ಕಿಮೀ ಅಟಲ್ ಟನೆಲ್ಗೆ 3 ಸಾವಿರ ಕೋಟಿ. ಇಲ್ಲಿ ಸದಾಶಿವನಗರದಿಂದ ಡೈರಿ ವೃತ್ತಕ್ಕೆ ಸುರಂಗ ಮಾಡಲು ಪ್ರತಿ ಕಿಮೀಗೆ 1500 ಕೋಟಿ. ಏನು ಪ್ರಾಜೆಕ್ಟ್ ಸರ್ ಇದು ಎಂದು ತೇಜಸ್ವಿ ಸೂರ್ಯ ಅವರು ಕೇಳಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರಾಗಿ ಸುರಂಗ ರಸ್ತೆ ಯೋಜನೆ ಬೆಂಗಳೂರಿನವರ ಮುಂದೆ ನಿಂತಿದೆ. 18 ಕಿಮೀ ಯೋಜನೆಗೆ 18,500 ಕೋಟಿಯನ್ನು ಇದಕ್ಕಾಗಿ ಬಳಸುವುದಾಗಿ ತಿಳಿಸಿದ್ದಾರೆ. ಹೆಬ್ಬಾಳದಿಂದ ಡೈರಿ ವೃತ್ತದ ವರೆಗೆ ಕೇವಲ ಕಾರುಗಳಿಗಾಗಿ ಮಾಡುತ್ತಿರುವ ಯೋಜನೆ ಇದಾಗಿದೆ. ಈ ಯೋಜನೆಯ ಡಿಪಿಆರ್, ಸಾಧ್ಯಾಸಾಧ್ಯತೆ ವರದಿಯಲ್ಲಿ ಸಾಕಷ್ಟು ಅವ್ಯವಹಾರ ಮತ್ತು ತಪ್ಪುಗಳು ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದರು.
ಈ ರಸ್ತೆಯಲ್ಲಿ ಗಂಟೆಗೆ 600ರಿಂದ 1600 ಜನರು ಓಡಾಡಬಹುದು. ಬೈಕ್, ದ್ವಿಚಕ್ರ ವಾಹನಕ್ಕೆ ಅವಕಾಶ ಆದರೆ 7500 ಜನರು ಓಡಾಡಬಹುದು. ಅದೇ ಜಾಗದಲ್ಲಿ ಮೆಟ್ರೊ ಮಾಡಿದರೆ, ಗಂಟೆಗೆ 25 ಸಾವಿರ ಜನರು ಓಡಾಡಬಹುದು. ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹಾರಕ್ಕೆ ಗಂಟೆಗೆ 1600 ಜನರು ಓಡಾಡುವ ಯೋಜನೆ ಬೇಕೇ, ಕೇವಲ ಕಾರು ಇರುವವರಿಗೆ ಅನುಕೂಲ ಆಗುವ ಯೋಜನೆ ಆಗಬೇಕೇ ಅಥವಾ ಜನಸಾಮಾನ್ಯರು, 25 ಸಾವಿರ ಜನರು ಓಡಾಡುವ ಮೆಟ್ರೋ ಯೋಜನೆ ಆಗಬೇಕೇ ಎಂದು ಕೇಳಿದರು.