Menu

ಯಾವುದೇ ಕಾರಣಕ್ಕೂ ಪೊಲೀಸರು ರಾಜಕೀಯ ಹಿಂಬಾಲಕರಾಗಬೇಡಿ: ಡಿಕೆ ಶಿವಕುಮಾರ್‌

“ಯಾವುದೇ ಸರ್ಕಾರ ಬಂದರೂ ನಿಮ್ಮ ಆತ್ಮ ವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಮಾಜ ಹಾಗೂ ಸರ್ಕಾರ ಪೊಲೀಸರ ಮೇಲೆ ಬಹಳ ವಿಶ್ವಾಸ ಇಟ್ಟಿರುತ್ತದೆ. ನೀವೇ ಸಮಾಜ ರಕ್ಷಕರು. ನಾವು ಅಧಿಕಾರಕ್ಕೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ನಾನು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ. ಇಂದು ನೀವೆಲ್ಲರೂ ನಿಮ್ಮ ಸಮವಸ್ತ್ರವನ್ನು ಶಿಸ್ತಿನಿಂದ ಧರಿಸಿ, ಆತ್ಮವಿಶ್ವಾಸದಲ್ಲಿ ಕೂತಿದ್ದೀರಿ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಆಯಧಪೂಜೆ ಸಂದರ್ಭ ಕೆಲವರು ವಿಜಯಪುರ ಹಾಗೂ ಉಡುಪಿಯಲ್ಲಿ ಸಮವಸ್ತ್ರ ತೆಗೆದು ಕೇಸರಿ ವಸ್ತ್ರ ಧರಿಸಿದ್ದರು. ರಾಜಕೀಯ ಒತ್ತಡ ಅಥವಾ ಬೇರೆಯವರನ್ನು ಮೆಚ್ಚಿಸಲು ಈ ರೀತಿ ಮಾಡಿದರೆ ನಿಮ್ಮನ್ನು ನೀವು ಮಾರಿಕೊಂಡಂತೆ. ನಿಮ್ಮ ವ್ಯಕ್ತಿತ್ವ, ಇಲಾಖೆಗೆ ಇರುವ ಘನತೆ ನಾಶವಾಗುತ್ತದೆ. ನೀವುಗಳು ರಾಜಕೀಯ ಹಿಂಬಾಲಕರಾಗುತ್ತೀರಿ. ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ನೀವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ” ಎಂದು ಹೇಳಿದರು.

“ಫೋನ್ ಬಂದ ಬಳಿಕ ಸೈಬರ್ ಅಪರಾಧ ಹೆಚ್ಚಾಗಿವೆ. ಇದನ್ನು ಹತೋಟಿಗೆ ತರಲು, ಮೇಲಾಧಿಕಾರಿಗಳು ಮಾತ್ರವಲ್ಲ, ಕೆಳ ಹಂತದ ಅಧಿಕಾರಿಗಳು ತಯಾರಾಗಬೇಕು. ಬೆಂಗಳೂರು ನಗರ ಹಾಗೂ ಇತರೇ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ನೋಂದಣಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ. ನಮ್ಮನೆರೆ ಮನೆಯವರು ಆದಿಕೇಶವಲು ಎಂಬುವವರ ಮನೆಯಲ್ಲಿ ಕಳ್ಳತನವಾಗಿ ಎಷ್ಟೋ ದಿನಗಳಾದರೂ ಅವರಿಗೆ ಗೊತ್ತಾಗಿರಲಿಲ್ಲ. ಆಭರಣ ಮಾರಾಟವಾಗಿ ಬೇರೆಯವರು ಧರಿಸಿದ್ದನ್ನು ನೋಡಿದ ಬಳಿಕ ಮನೆಯಲ್ಲಿ ಬಂದು ಹುಡುಕುತ್ತಾರೆ. ಮೂರು ವರ್ಷಗಳ ಬಳಿಕ ಕಳ್ಳತನವಾಗಿದೆ ಎಂದು ತಿಳಿಯಿತು. ಹೀಗಾಗಿ ನೀವು ಪ್ರತಿ ಮನೆಯಲ್ಲಿ ಕೆಲಸ ಮಾಡುವವರ ದಾಖಲೆ ಇಟ್ಟುಕೊಳ್ಳಿ. ಈ ಬಗ್ಗೆ ಆಲೋಚನೆ ಮಾಡಿ” ಎಂದು ಸಲಹೆ ನೀಡಿದರು.

ಪೊಲೀಸರ ಯಶಸ್ಸಿನಲ್ಲೇ, ಸರ್ಕಾರದ ಯಶಸ್ಸು 

 

“ಪೊಲೀಸ್ ಅಧಿಕಾರಿಗಳಿಗೆ ಆತ್ಮ ವಿಶ್ವಾಸ ಮೂಡಿಸಲು ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಇವರಿಬ್ಬರೂ ನಮ್ಮ ನಾಡಿಗೆ ರಕ್ಷಣೆ ನೀಡುತ್ತಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ ಎಂದರೆ ಬಹಳ ಗೌರವ ಪಡೆದಿದೆ. ನಾನು ಇತ್ತೀಚೆಗೆ ಹಿರಿಯ ವಕೀಲರು, ನ್ಯಾಯಾಧೀಶರನ್ನು ಭೇಟಿ ಮಾಡಿದಾಗ ನಮ್ಮ ರಾಜ್ಯದ ಅನೇಕ ಘಟನೆಗಳ ವಿಚಾರವಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿ ಅವರು ತೆಗೆದುಕೊಂಡಿರುವ ನಿರ್ಧಾರ, ವರದಿ ಹಾಗೂ ನ್ಯಾಯಾಲಯ ಕೊಟ್ಟಿರುವ ತೀರ್ಪು ನೋಡಿ ಅವರು ಬಹಳ ಪ್ರಶಂಸೆ ವ್ಯಕ್ತಪಡಿಸಿದ್ದರು. ನಮ್ಮ ಪೊಲೀಸ್ ಅಧಿಕಾರಿಗಳು ಎಷ್ಟು ಸಮರ್ಥರಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ನಾನು ಈ ಹಿಂದೆ ಮೈಸೂರು ಪರೇಡ್ ಗೆ ಹೋಗಿದ್ದೆ. ನಿಮ್ಮ ಕಾರ್ಯಕ್ರಮದಲ್ಲಿ ಎಷ್ಟು ಸುಧಾರಣೆ ಕಂಡಿದೆ ಎಂದರೆ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳ ರೀತಿ ನಡೆಯುತ್ತಿದೆ. ಪೊಲೀಸರ ಯಶಸ್ಸಿನಲ್ಲೇ, ನಾವು ಸರ್ಕಾರದ ಯಶಸ್ಸು ಕಾಣುತ್ತೇವೆ” ಎಂದರು.

“ನಮ್ಮ ರಾಜ್ಯದ ಪೊಲೀಸ್ ಸಿಬ್ಬಂದಿ ಯಾವುದರಲ್ಲೂ ಕಡಿಮೆ ಇಲ್ಲ. 1988ರಲ್ಲಿ ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ವಿಶ್ವ ಯುವ ಸಮ್ಮೇಳನಕ್ಕೆ ಉತ್ತರ ಕೊರಿಯಾದ ಪ್ಯೋಂಗ್ಯಾಂಗ್ ಗೆ ತೆರಳಿದ್ದೆ. ಆಗ ಅಲ್ಲಿನ ಪ್ರಮುಖ ವೃತ್ತವೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಏಕಾಂಗಿಯಾಗಿ ಸಂಚಾರ ದಟ್ಟಣೆಯನ್ನು ನಿಭಾಯಿಸುತ್ತಿದ್ದರು. ನಾನು ಆಕೆಯ ಜೊತೆ ಮಾತನಾಡಿ ನಿಮಗೆ ಸಂಬಳ ಎಷ್ಟು ಎಂದು ಕೇಳಿದೆ. ಆಗ ಆಕೆ ಕೋಪಗೊಂಡು ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಸಂಬಳಕ್ಕಾಗಿ ಅಲ್ಲ ಎಂದು ಹೇಳಿದಳು” ಎಂದು ಮೆಲುಕು ಹಾಕಿದರು.

“ಪರಮೇಶ್ವರ್ ಅವರು ಈ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಬಳಿಕ ಹೊಸ ರೂಪ ನೀಡಿದ್ದು, ನನಗೆ ಬಹಳ ಸಂತೋಷವಿದೆ. ನಿಮ್ಮ ಹಿತಕ್ಕಾಗಿ ವಸತಿ ನಿಲಯ, ಸೇವೆ ವೇಳೆ ಮೃತರಾದರೆ ಪರಿಹಾರ, ಸನ್ಮಿತ್ರ ಕಾರ್ಯಕ್ರಮ ತರಲಾಗುತ್ತಿದೆ. ನಿಮಗೆ ನಿಮ್ಮ ಕುಟುಂಬಕ್ಕಾಗಿ ಅನೇಕ ಯೋಜನೆ ತರಲಾಗಿದೆ. ನಿಮ್ಮ ಮೇಲೆ ಸರ್ಕಾರಕ್ಕೆ ಅಪಾರ ವಿಶ್ವಾಸವಿದೆ. ನಿಮ್ಮ ಯಶಸ್ಸಿನಲ್ಲಿ ಸರ್ಕಾರದ ಯಶಸ್ಸು ಅಡಗಿದೆ. ಆಯುಕ್ತರಾದ ಸಲೀಂ ಅವರು ಸಂಚಾರ ದಟ್ಟಣೆ ವಿಚಾರವಾಗಿ ಬಹಳ ಅರಿವಿದೆ” ಎಂದು ತಿಳಿಸಿದರು.

“ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದಾರೆ. 1.23 ಕೋಟಿ ವಾಹನಗಳಿವೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಜನ ಸಾರ್ವಜನಿಕ ಸಾರಿಗೆಗಿಂತ ವೈಯಕ್ತಿಕ ಸಾರಿಗೆ ಮೇಲೆ ಆಸಕ್ತಿ ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಅಗಲೀಕರಣ ಕಷ್ಟವಾಗಿದೆ. ನಮ್ಮ ಸರ್ಕಾರ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬಿಬಿಸಿ ರಸ್ತೆ, ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್ ಸೇರಿದಂತೆ ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ. ಸಂಚಾರ ದಟ್ಟಣೆ ನಿವಾರಣೆಗೆ ಇರುವ ಸಲಹೆಗಳನ್ನು ನೀವೇ ಸರ್ಕಾರಕ್ಕೆ ಸಲ್ಲಿಸಿ” ಎಂದರು.

Related Posts

Leave a Reply

Your email address will not be published. Required fields are marked *